ನವದೆಹಲಿ: ದೆಹಲಿಯಲ್ಲಿ ಬಿಜೆಪಿಯ ವಸತಿ ಸಂಕೀರ್ಣ ಮತ್ತು ಸಭಾಂಗಣವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ ಭಾರತೀಯ ಜನಸಂಘದಿಂದ ಇಂದಿನ ಬಿಜೆಪಿವರೆಗಿನ ಪಕ್ಷದ ಬೆಳವಣಿಗೆಯ ಹಾದಿಯನ್ನು ಮೆಲುಕು ಹಾಕಿದ್ರು. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮೋದಿ, ಬಿಜೆಪಿಯ ಬೆಳವಣಿಗೆಯ ದಾರಿಯನ್ನು ನೆನಪಿಸಿಕೊಂಡ್ರು
ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಕೇವಲ 2 ಸ್ಥಾನ ಪಡೆದಿತ್ತು. ಆದರೆ 2019 ರ ಲೋಕಸಭೆ ಚುನಾವಣೆಯಲ್ಲಿ ನಾವು 300 ಸೀಟ್ ಪಡೆದೆವು. 1984ರ ಚುನಾವಣೆಯ ನಂತರ ಬಿಜೆಪಿ ಮುಗಿದುಹೋಗುತ್ತೆ ಎನ್ನುವಂತಾಗಿತ್ತು ಆದರೆ ಪಕ್ಷ ಎಂದಿಗೂ ಎದೆಗುಂದಲಿಲ್ಲ ಎಂದ್ರು.
ಬಿಜೆಪಿ ನಡೆದು ಬಂದ ಹಾದಿಯನ್ನು ನೆನಪಿಸಿಕೊಂಡ ಪ್ರಧಾನಿ ಬಿಜೆಪಿ ಬೇರುಮಟ್ಟದಲ್ಲಿ ಗಟ್ಟಿಯಾಗಿದೆ. ನಾವು ತಳಮಟ್ಟದಿಂದ ಬೆಳೆದುಬಂದಿದ್ದೇವೆ. ಕಾಂಗ್ರೆಸ್ ಪ್ರಚಂಡ ಗೆಲುವು ಸಾಧಿಸಿದಾಗಲೂ ನಾವು ಧೃತಿಗೆಡದೆ ನಿರಾಶೆಗೊಳ್ಳದೆ, ಯಾಋನ್ನೂ ದೂಷಿಸದೆ ಪಕ್ಷವನ್ನು ಬಲಪಡಿಸಲು ನಾವು ಜನರ ನಡುವೆ ಕೆಲಸ ಮಾಡುತ್ತಾ ಬಂದಿದ್ದೇವೆ ಎಂದ್ರು
ತಮ್ಮ ಭಾಷಣದಲ್ಲಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಭಾರತದ ಎಲ್ಲಾ ಭ್ರಷ್ಟಶಕ್ತಿಗಳು ಒಗ್ಗೂಡುತ್ತಿವೆ. ಭಾರತವು ಸಾಧನೆಯ ಹಾದಿಯಲ್ಲಿ ನಡೆಯುತ್ತಿರುವಾಗ ಭಾರತದ ಒಳಗೆ ಮತ್ತು ಹೊರಗೆ ಭಾರತ ವಿರೋಧಿ ಶಕ್ತಿಗಳು ಒಗ್ಗೂಡುವುದು ಸಹಜ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತವು ಸಾಂವಿಧಾನಿಕ ಸಂಸ್ಥೆಗಳಿಂದ ಬಲವಾದ ಅಡಿಪಾಯವನ್ನು ಹೊಂದಿದೆ. ಅದರಿಂದಾಗಿಯೇ ಅವರು ಹೆದರಿದ್ದಾರೆ. ಅವರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಲಾಗುತ್ತಿದೆ.
ನಮ್ಮ ಇಲಾಖೆಗಳು ಭ್ರಷ್ಟರ ಬೇಟೆಯಾಡಿ ಕ್ರಮ ಕೈಗೊಂಡರೆ ಇಲಾಖೆಯನ್ನೇ ಪ್ರಶ್ನಿಸುತ್ತಾರೆ. ನ್ಯಾಯಾಲಯ ತೀರ್ಪು ನೀಡಿದಾಗ ಅದನ್ನು ಪ್ರಶ್ನಿಸಲಾಗುತ್ತದೆ. ಕೆಲವು ಪಕ್ಷಗಳು ಒಟ್ಟಿಗೆ ಭ್ರಷ್ಟರನ್ನು ರಕ್ಷಿಸಲು ಪಣ ತೊಟ್ಟಿರುತ್ತವೆ ಎಂದರು. ಆದರೆ ಜನರು ಬಿಜೆಪಿಯ ಮೇಲೆ ವಿಶ್ವಾಸವಿಟ್ಟಿದ್ದಾರೆ ಅನ್ನೋದು ನನಗೆ ನೆಮ್ಮದಿಯ ವಿಷಯ ಎಂದ್ರು