ಗಾಂಧೀನಗರ: ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi) ಅವರು ಶನಿವಾರ ಗುಜರಾತ್‌ನ ಸೋಮನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರಿಗೆ ಭವ್ಯ ಹಾಗೂ ಅದ್ದೂರಿ ಸ್ವಾಗತ ದೊರೆಯಿತು.
ಸೋಮನಾಥ ಸ್ವಾಭಿಮಾನ ಪರ್ವ್ ಆಚರಣೆಯ ಭಾಗವಾಗಿ ದೇವಸ್ಥಾನಕ್ಕೆ ಪ್ರಧಾನಿ ಭೇಟಿ ನೀಡಿದರು. ಈ ವೇಳೆ ದೇವಸ್ಥಾನದ ದಾರಿಯುದ್ದಕ್ಕೂ ಮೋದಿಯನ್ನು ನೋಡಲು ಅನೇಕರು ನಿಂತಿದ್ದರು. ಅಷ್ಟೇ ಅಲ್ಲದೇ ಮೋದಿ ಮೋದಿ ಎಂದು ಘೋಷಣೆಯನ್ನು ಕೂಗಿದ್ದಾರೆ. ಅದಾದ ಬಳಿಕ ಪಾರಂಪರಿಕ ವಿಧಿವಿಧಾನಗಳೊಂದಿಗೆ ಗೌರವ ಸಲ್ಲಿಸಲಾಯಿತು. ದೇವಾಲಯಕ್ಕೆ ಆಗಮಿಸಿದ ತಕ್ಷಣ ಪ್ರಧಾನಿ ಮೋದಿ ಅವರು ಪೂಜೆ–ಪುನಸ್ಕಾರಗಳಲ್ಲಿ ಭಾಗವಹಿಸಿ, ಭಕ್ತರೊಂದಿಗೆ ಓಂಕಾರ ಮಂತ್ರ ಜಪವನ್ನು ಪಠಿಸಿದರು.
#WATCH | Gujarat | PM Narendra Modi attends the 72-hour-long ‘Aum’ chants at Somnath Temple, which are being performed as part of Somnath Swabhiman Parv, from 8-11 January.
Source: DD pic.twitter.com/2wf5p9a9RK
— ANI (@ANI) January 10, 2026
ಐತಿಹಾಸಿಕ ಸೋಮನಾಥ ದೇವಾಲಯದ ಮೇಲೆ ಮೊದಲ ದಾಳಿ ನಡೆದು 1,000 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಸ್ಮರಣಾರ್ಥವಾಗಿ ಸೋಮನಾಥ ಸ್ವಾಭಿಮಾನ ಪರ್ವ್ ಜನವರಿ 8 ರಿಂದ ಆರಂಭಗೊಂಡಿದ್ದು, ಜನವರಿ 11ರಂದು ಮುಕ್ತಾಯಗೊಳ್ಳಲಿದೆ.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ವಿಶೇಷವಾಗಿ ಆಯೋಜಿಸಲಾದ ಮೆಗಾ ಡ್ರೋನ್ ಶೋ ವೀಕ್ಷಿಸಿದರು. ಡ್ರೋನ್ ಪ್ರದರ್ಶನದಲ್ಲಿ ಭಗವಾನ್ ಶಿವ, ಶಿವಲಿಂಗ ಹಾಗೂ ಸೋಮನಾಥ ದೇವಸ್ಥಾನದ 3ಡಿ ಆಕೃತಿಗಳು ಆಕಾಶದಲ್ಲಿ ಮೂಡಿಬಂದವು. ಈ ಅದ್ಭುತ ದೃಶ್ಯಗಳು ಭಕ್ತರು ಮತ್ತು ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸಿದವು.
ಅದೇ ರೀತಿ ಪ್ರಧಾನಿ ಮೋದಿ ಅವರು ಇಂದಿನಿಂದ ಮೂರು ದಿನಗಳ ಕಾಲ ಗುಜರಾತ್ ಪ್ರವಾಸದಲ್ಲಿದ್ದಾರೆ. ಇಂದು ಗಿರ್ ಸೋಮನಾಥ ಜಿಲ್ಲೆಯ ಸೋಮನಾಥ ಮಹಾದೇವ ದೇವಾಲಯದ ಬಳಿಯ ಹೆಲಿಪ್ಯಾಡ್‌ನಲ್ಲಿ ಪ್ರಧಾನಿಯನ್ನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಇತರ ಗಣ್ಯರು ಬರಮಾಡಿಕೊಂಡರು.
ಭಾನುವಾರ ಬೆಳಿಗ್ಗೆ, ಪ್ರಧಾನಿಯವರು ಶೌರ್ಯ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ, ಇದು ಶತಮಾನಗಳಿಂದ ದೇವಾಲಯವನ್ನು ರಕ್ಷಿಸಿದವರನ್ನು ಗೌರವಿಸುವ ವಿಧ್ಯುಕ್ತ ಮೆರವಣಿಗೆಯಾಗಿದೆ. 108 ಕುದುರೆಗಳ ಸಾಂಕೇತಿಕ ಮೆರವಣಿಗೆ ನಡೆಯಲಿದೆ. ನಂತರ ಮೋದಿ ಕಚ್ ಮತ್ತು ಸೌರಾಷ್ಟ್ರ ಪ್ರದೇಶಗಳಿಗಾಗಿ ವೈಬ್ರಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನದಲ್ಲಿ ಭಾಗವಹಿಸಲು ರಾಜ್‌ಕೋಟ್‌ಗೆ ಪ್ರಯಾಣಿಸಲಿದ್ದಾರೆ. ಅವರು ವ್ಯಾಪಾರ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.
ನಂತರ ಪ್ರಧಾನಿಯವರು ಅಹಮದಾಬಾದ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಅವರು ಅಹಮದಾಬಾದ್ ಮೆಟ್ರೋದ ಎರಡನೇ ಹಂತದ ಸೆಕ್ಟರ್ 10 ಎ (ಸಚಿವಾಲಯ) ಮತ್ತು ಗಾಂಧಿನಗರದ ಮಹಾತ್ಮ ಮಂದಿರ ನಡುವಿನ ಉಳಿದ ಭಾಗವನ್ನು ಉದ್ಘಾಟಿಸಲಿದ್ದಾರೆ.
ಇದನ್ನೂ ಓದಿ: ಟ್ರಂಪ್ ಜೊತೆ ಮೋದಿ ಮಾತನಾಡದ್ದಕ್ಕೆ ಒಪ್ಪಂದ ಸಾಧ್ಯವಾಗಿಲ್ಲ: ಅಮೆರಿಕ ಹೇಳಿಕೆ ತಳ್ಳಿ ಹಾಕಿದ ಭಾರತ