ನವದೆಹಲಿ : ಮುಂಬರುವ ಜುಲೈ 21 ರಿಂದ ಆಗಸ್ಟ್ 21 ರ ವರೆಗೆ ಸಂಸತ್ತಿನ ಮಳೆಗಾಲದ ಅಧಿವೇಶನ (Monsoon session) ನಡೆಯಲಿದ್ದು, ಅಲ್ಲಿಯವರೆಗೆ ಪ್ರಧಾನಿ ನರೇಂದ್ರ ಮೋದಿ (PM Modi) ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟ (Cabinet) ಪುನಾರಚನೆಯಾಗುವ ಸಾಧ್ಯತೆಗಳಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ. ಆಗಸ್ಟ್ ಅಂತ್ಯದವರೆಗೂ ಮೋದಿ ಸರ್ಕಾರದಲ್ಲಿ ಯಾವುದೇ ಸಂಪುಟ ಸರ್ಜರಿ ಅಸಾಧ್ಯ ಎನ್ನಲಾಗುತ್ತಿದೆ. ಸಂಪುಟ ಪುನಾರಚನೆ ಸೇರಿದಂತೆ ಪಕ್ಷದ ಸಂಘಟನಾತ್ಮಕ ಪ್ರಕ್ರಿಯೆಗಳನ್ನು ಅಧಿವೇಶನ ಮುಗಿದ ನಂತರವೇ ಕೈಗೊಳ್ಳಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ.
ಪ್ರಧಾನಿ ಮೋದಿ ವಿದೇಶ ಪ್ರವಾಸ
ಮುಂದಿನ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು ಒಂದು ವಾರಗಳ ಕಾಲ ಮಹತ್ವದ ವಿದೇಶಿ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಅವರು ವಿದೇಶ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ ಕೇವಲ ಒಂದು ವಾರದ ಅವಧಿಯಲ್ಲೇ (ಜುಲೈ 21 ರಿಂದ) ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಸರ್ಕಾರದ ಸಂಪೂರ್ಣ ಆದ್ಯತೆ ಅಧಿವೇಶನವನ್ನು ಯಶಸ್ವಿಯಾಗಿ ನಿರ್ವಹಿಸುವುದಾಗಿದೆ.
ನಿರ್ಣಾಯಕ ಶಾಸನಗಳ ಮಂಡನೆಗೆ ಸರ್ಕಾರದ ಮೊದಲ ಆದ್ಯತೆ
ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ಕೆಲವು ಅತ್ಯಂತ ಪ್ರಮುಖ ಹಾಗೂ ನಿರ್ಣಾಯಕ ಮಸೂದೆಗಳನ್ನು ಮಂಡಿಸಿ ಅಂಗೀಕಾರ ಪಡೆಯಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಸಂಪುಟ ಪುನಾರಚನೆಯ ಗೊಂದಲಗಳು ಅಧಿವೇಶನದ ಮೇಲೋ ಅಥವಾ ಹೊಸ ಸಚಿವರ ಇಲಾಖಾ ಜವಾಬ್ದಾರಿಗಳ ಮೇಲೋ ನಕಾರಾತ್ಮಕ ಪರಿಣಾಮ ಬೀರಬಾರದು ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ.ಹಾಗಾಗಿ, ಜುಲೈ ಮತ್ತು ಆಗಸ್ಟ್‌ನಲ್ಲಿ ನಡೆಯಲಿರುವ ಈ ಅಧಿವೇಶನ ಮುಗಿದ ಬಳಿಕ, ಪ್ರಧಾನಿಯವರು ಕೆಲವು ದಿನಗಳ ಕಾಲ ತಾವೇ ಖುದ್ದಾಗಿ ಸಮಯ ತೆಗೆದುಕೊಂಡು, ಸಚಿವರ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಿ ಆ ನಂತರವೇ ಅಂತಿಮವಾಗಿ ಕೇಂದ್ರ ಸಂಪುಟ ಪುನಾರಚನೆ ಎನ್ನಲಾಗಿದೆ. ಅಲ್ಲಿಯವರೆಗೆ ಸಚಿವ ಸ್ಥಾನದ ಆಕಾಂಕ್ಷಿಗಳು ಕಾಯುವುದು ಅನಿವಾರ್ಯವಾಗಿದೆ.