ಪ್ರಧಾನಿ ನರೇಂದ್ರ ಮೋದಿ (PM Modi) ಅವರ ದಕ್ಷಿಣ ಭಾರತ ಪ್ರವಾಸದ ಅಂಗವಾಗಿ ಇಂದು ಕೇರಳ ಹಾಗೂ ತಮಿಳುನಾಡಿನಲ್ಲಿ ಹಲವು ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು, ಈ ವೇಳೆ ಮಂಗಳೂರನ್ನು (Mangaluru) ಸಂಪರ್ಕಿಸುವ ಎರಡು ಹೊಸ ರೈಲು (Indian railway) ಸೇವೆಗಳಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ.
ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ನಡೆಯುವ ಸಮಾರಂಭದಲ್ಲಿ ರಾಮೇಶ್ವರಂ–ಮಂಗಳೂರು ಎಕ್ಸ್ ಪ್ರೆಸ್ ಮತ್ತು ತಿರುನಲ್ವೇಲಿ-ಮಂಗಳೂರು ಎಕ್ಸ್ ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಲಾಗುತ್ತದೆ. ಈ ರೈಲು ಸೇವೆಗಳ ಆರಂಭದಿಂದ ಕರ್ನಾಟಕದ ಕರಾವಳಿ ಭಾಗದ ಜನರಿಗೆ ಹಾಗೂ ಯಾತ್ರಾರ್ಥಿಗಳಿಗೆ ಮಹತ್ವದ ಸೌಲಭ್ಯ ದೊರೆಯಲಿದೆ.
ಪವಿತ್ರ ಕ್ಷೇತ್ರವಾದ ರಾಮೇಶ್ವರಂಗೆ ನೇರ ಸಂಪರ್ಕ ದೊರೆಯುವ ಮೂಲಕ ಭಕ್ತರಿಗೆ ಪ್ರಯಾಣ ಸುಲಭವಾಗಲಿದೆ. ಹೊಸ ರೈಲು ಮಾರ್ಗವು ತಮಿಳುನಾಡು, ಕೇರಳ ಹಾಗೂ ಕರ್ನಾಟಕವನ್ನು ಸಂಪರ್ಕಿಸುವುದರಿಂದ ಮೂರು ರಾಜ್ಯಗಳ ಪ್ರಯಾಣಿಕರಿಗೂ ಅನುಕೂಲವಾಗಲಿದೆ.
ಇದೊಂದಲ್ಲದೆ, ದಕ್ಷಿಣ ಭಾರತ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಕೇರಳ ಮತ್ತು ತಮಿಳುನಾಡಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಈ ಯೋಜನೆಗಳು ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವತ್ತ ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಗಿದೆ.