ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Pm Modi) ಅವರ ಬೆಂಗಳೂರು (Bengaluru) ಭೇಟಿಯ ವೇಳೆ ಆರ್ಟ್ ಆಫ್ ಲೀವಿಂಗ್ ಆಶ್ರಮದ ಸಮೀಪ ಜಿಲೆಟಿನ್ ಕಡ್ಡಿಗಳು (Giletin Stick) ಪತ್ತೆಯಾಗಿದ್ದ ಪ್ರಕರಣದ ಅಸಲಿ ರಹಸ್ಯ ಕೊನೆಗೂ ತನಿಖೆಯಲ್ಲಿ ಬಯಲಾಗಿದೆ.
ದೇಶಾದ್ಯಂತ ಭಾರಿ ಸಂಚಲನ ಹಾಗೂ ಆತಂಕ ಮೂಡಿಸಿದ್ದ ಈ ಘಟನೆಯು ಯಾವುದೇ ಉಗ್ರ ಸಂಘಟನೆಯ ಕೃತ್ಯವಲ್ಲ, ಬದಲಿಗೆ ಆಶ್ರಮದ ಮೇಲಿನ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದಿರುವ ಸಂಚು ಎಂಬ ಆಘಾತಕಾರಿ ಮಾಹಿತಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಜನ್ಮದಿನೋತ್ಸವದ ಅಂಗವಾಗಿ ಇತ್ತೀಚೆಗೆ (ಮೇ 10 ರಂದು) ಪ್ರಧಾನಿ ನರೇಂದ್ರ ಮೋದಿ ಅವರು ಆಶ್ರಮಕ್ಕೆ ಆಗಮಿಸಿದ್ದರು. ಆದರೆ ಪ್ರಧಾನಿ ಭೇಟಿಯ ಕೆಲವೇ ಗಂಟೆಗಳ ಮುನ್ನ ಆಶ್ರಮದ ಸಮೀಪವೇ ಸ್ಫೋಟಕ ಸಾಮಗ್ರಿ ಪತ್ತೆಯಾಗಿದ್ದು ಇಡೀ ದೇಶದ ಗಮನ ಸೆಳೆದಿತ್ತು. ಇದು ಪ್ರಧಾನಿ ಭದ್ರತೆಯನ್ನೇ ಪ್ರಶ್ನಿಸುವಂತೆ ಮಾಡಿತ್ತು.
ಆದರೆ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ಈ ಜಿಲೆಟಿನ್ ಕಡ್ಡಿಗಳನ್ನು ಪರಿಶೀಲಿಸಿದಾಗ, ಒಂದು ವೇಳೆ ಇವುಗಳಿಗೆ ಬೆಂಕಿ ತಗುಲಿದ್ದರೂ ಇವು ಸ್ಫೋಟಗೊಳ್ಳುವ ಸ್ಥಿತಿಯಲ್ಲಿರಲಿಲ್ಲ ಎಂಬುದು ದೃಢಪಟ್ಟಿದೆ. ರವಿಶಂಕರ್ ಗುರೂಜಿ ಅವರ ಪ್ರಭಾವವನ್ನು ಕುಗ್ಗಿಸಲು ಮತ್ತು ಪ್ರಧಾನಿಯವರು ಆಶ್ರಮಕ್ಕೆ ಬರದಂತೆ ತಡೆಯಲು ಕಿಡಿಗೇಡಿಗಳು ಈ ಪ್ಲಾನ್ ಮಾಡಿದ್ದರು ಎನ್ನಲಾಗಿದೆ.
ಆರೋಪಿಗಳು ಅತ್ಯಂತ ಚಾಲಾಕಿತನದಿಂದ ಈ ಸಂಚು ರೂಪಿಸಿದ್ದರು. ಆಶ್ರಮದ ಸುತ್ತಮುತ್ತ ಯಾವುದೇ ಸಿಸಿಟಿವಿ ಕ್ಯಾಮೆರಾಗಳ ಕಣ್ಣಿಗೆ ಬೀಳದ ಅತ್ಯಂತ ಸುರಕ್ಷಿತವಾದ ಜಾಗವನ್ನು ಆಯ್ದುಕೊಂಡು, ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 7 ಗಂಟೆಯ ಅವಧಿಯಲ್ಲಿ ಯಾರೂ ಇಲ್ಲದ ವೇಳೆ ಜಿಲೆಟಿನ್ ಕಡ್ಡಿಗಳನ್ನು ತಂದಿರಿಸಲಾಗಿತ್ತು. ಮೇಲ್ನೋಟಕ್ಕೆ ಇದು ದೊಡ್ಡ ಸ್ಫೋಟದ ಸಂಚಿನಂತೆ ಬಿಂಬಿಸಿ ಆಶ್ರಮಕ್ಕೆ ಕೆಟ್ಟ ಹೆಸರು ತರುವುದು ಅವರ ಮುಖ್ಯ ಉದ್ದೇಶವಾಗಿತ್ತು ಎಂದು ತನಿಖೆ ವೇಳೆ ಗೊತ್ತಾಗಿದೆ.
ಪ್ರಧಾನಿ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಬೆಂಗಳೂರು ದಕ್ಷಿಣ ವಲಯ ಪೊಲೀಸರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಸ್ಥಳೀಯ ಸಿಸಿಟಿವಿಗಳು ಸಿಗದಿದ್ದರೂ, ಮೊಬೈಲ್ ಟವರ್ ಲೋಕೇಶನ್ (Tower Location) ಮತ್ತು ಆಧುನಿಕ ತಾಂತ್ರಿಕ ವಿಶ್ಲೇಷಣೆಯ ಸಹಾಯದಿಂದ ಘಟನಾ ಸ್ಥಳದಲ್ಲಿದ್ದ ಅನುಮಾನಾಸ್ಪದ ನಂಬರ್‌ಗಳ ಸುಳಿವು ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಇಡೀ ಪ್ರಕರಣದ ಸೂತ್ರಧಾರಿಗಳನ್ನು ಬಂಧಿಸುವುದಾಗಿ ಪೊಲೀಸ್ ಇಲಾಖೆ ಭರವಸೆ ನೀಡಿದೆ.