ರಾಂಚಿ: ಜಾರ್ಖಂಡ್‌ನ (Jharkhand) ಛತ್ರ ಜಿಲ್ಲೆಯ ಸಿಮಾರಿಯಾ ಬಳಿ ಸೋಮವಾರ ಸಂಜೆ ವಿಮಾನವೊಂದು ಪತನವಾಗಿದೆ (Plane Crash). ಅಪಘಾತಕ್ಕೀಡಾದ ಏರ್ ಆಂಬ್ಯುಲೆನ್ಸ್‌ನಲ್ಲಿ (Air Ambulance) ಪ್ರಯಾಣಿದ್ದ ಎಲ್ಲಾ ಏಳು ಜನರು ಸಾವನ್ನಪ್ಪಿದ್ದಾರೆ.
ವಿಮಾನವು ರಾಂಚಿಯಿಂದ ದೆಹಲಿಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ರಾಜ್ಯ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಏರ್ ಆಂಬ್ಯುಲೆನ್ಸ್‌ನಲ್ಲಿದ್ದ ಏಳು ಮಂದಿಯೂ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ವಿಮಾನವು ರಾಂಚಿಯಿಂದ ದೆಹಲಿಗೆ ತೆರಳುತ್ತಿತ್ತು ಎಂದು ಛತ್ರ ಉಪ ಆಯುಕ್ತ ಕೀರ್ತಿಶ್ರೀ ಜಿ ತಿಳಿಸಿದ್ದಾರೆ.
ರೆಡ್‌ಬರ್ಡ್ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿದ್ದ ವಿಮಾನವು ರಾಂಚಿ ವಿಮಾನ ನಿಲ್ದಾಣದಿಂದ ಸಂಜೆ 7:11 ಕ್ಕೆ ಹೊರಟಿತು. ಛತ್ರ ಉಪ ಆಯುಕ್ತ ಕೀರ್ತಿಶ್ರೀ ಜಿ ಅವರ ಪ್ರಕಾರ, ವಿಮಾನವು ಸಂಜೆ 7:30 ರ ಸುಮಾರಿಗೆ ಕಾಣೆಯಾಯಿತು ಮತ್ತು ನಂತರ ದಟ್ಟವಾದ ಅರಣ್ಯ ಪ್ರದೇಶವಾದ ಸಿಮಾರಿಯಾದ ಬರಿಯಾಟು ಪಂಚಾಯತ್ ಪ್ರದೇಶದಲ್ಲಿ ಪತನಗೊಂಡಿದೆ.
ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ಶುಭಂ ಖಂಡೇಲ್ವಾಲ್ ಅವರು ಎಲ್ಲಾ ಏಳು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದೃಢಪಡಿಸಿದ್ದಾರೆ. ಬಲಿಪಶುಗಳನ್ನು ಈ ಕೆಳಗಿನವರು ಎಂದು ಗುರುತಿಸಲಾಗಿದೆ:
ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್
ಕ್ಯಾಪ್ಟನ್ ಸವ್ರಜ್‌ದೀಪ್ ಸಿಂಗ್
ಸಂಜಯ್ ಕುಮಾರ್
ಡಾ. ವಿಕಾಸ್ ಕುಮಾರ್ ಗುಪ್ತಾ
ಸಚಿನ್ ಕುಮಾರ್ ಮಿಶ್ರಾ
ಅರ್ಚನಾ ದೇವಿ
ಧುರು ಕುಮಾರ್
ರಾಂಚಿಯ ದೇವಕಮಲ್ ಆಸ್ಪತ್ರೆಯ ಸಿಇಒ ಅನಂತ್ ಸಿನ್ಹಾ ಅವರ ಪ್ರಕಾರ, ಲತೇಹರ್ ಜಿಲ್ಲೆಯ ನಿವಾಸಿ ಸಂಜಯ್ ಕುಮಾರ್ (41) ಅವರಿಗೆ ಏರ್ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಫೆಬ್ರವರಿ 16 ರಂದು 65% ರಷ್ಟು ಸುಟ್ಟ ಗಾಯಗಳೊಂದಿಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ದೆಹಲಿಯ ಆಸ್ಪತ್ರೆಗೆ ಸ್ಥಳಾಂತರಿಸುವ ಸಲುವಾಗಿ ಏರ್ ಆಂಬ್ಯುಲೆನ್ಸ್ ನಲ್ಲಿ ಕರೆದೊತ್ತಯತ್ತಿದ್ದಾಗ ದುರಂತ ಸಂಭವಿಸಿದೆ.
ಸ್ಥಳೀಯ ನಿವಾಸಿಗಳು ವಿಮಾನದ ಅಪಘಾತದ ಸಮಯದಲ್ಲಿ, ಪ್ರದೇಶದಲ್ಲಿ ಬಲವಾದ ಗಾಳಿ, ಭಾರೀ ಮಳೆ, ಮಿಂಚು ಮತ್ತು ಜೋರಾದ ಗುಡುಗು ಇತ್ತು ಎಂದು ತಿಳಿಸಿದ್ದಾರೆ. ಇದು ವಿಮಾನ ಪತನಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಇನ್ನು ವಿಮಾನ ಟೇಕ್ ಆಫ್ ಆದ ಸುಮಾರು 20 ನಿಮಿಷಗಳ ನಂತರ ವಾಯು ಸಂಚಾರ ನಿಯಂತ್ರಣದೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತು ಎಂದು ರಾಂಚಿ ವಿಮಾನ ನಿಲ್ದಾಣದ ನಿರ್ದೇಶಕ ವಿನೋದ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ : ಗಾಂಧೀಜಿ ಕುರಿತು ಯತ್ನಾಳ್ ನೀಡಿದ್ದ ವಿವಾದಾತ್ಮಕ ಹೇಳಿಕೆ ವೈರಲ್- VIDEO