ಬೆಂಗಳೂರು: ಕೆಪಿಸಿಸಿ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕರಿಗೇ ಟಿಕೆಟ್ ಕೊಡಬೇಕು ಇಲ್ಲವಾದ್ರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿದ ಹೈಡ್ರಾಮಾ ನಡೆದಿದೆ. ಎರಡನೇ ಪಟ್ಟಿ ಬಿಡುಗಡೆಗೆ ಕಾಂಗ್ರೆಸ್ ಕಸರತ್ತು ನಡೆಸುತ್ತಿರುವಾಗಲೇ ಪಕ್ಷದಲ್ಲಿ ಬಂಡಾಯದ ಬಿಸಿ ಹೆಚ್ಚಾಗಿದ್ದು ನಾಯಕರ ಪರ ಬೀದಿಗಿಳಿದಿರುವ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಮುಂದೆ ಆತ್ಮಹತ್ಯೆ ಯತ್ನದ ನಾಟಕ ಮಾಡಿದ್ದಾರೆ
ಬಿಜೆಪಿ ತೊರೆದ ಎನ್‍ವೈ ಗೋಪಾಲಕೃಷ್ಣ ಇಂದು ಕಾಂಗ್ರೆಸ್ ಸೇರಿದ್ದಾರೆ. ಮೊಳಕಾಲ್ಮೂರು ಟಿಕೆಟ್ ಆಕಾಂಕ್ಷೆ ಹೊಂದಿರುವ ಗೋಪಾಲಕೃಷ್ಣ ವಿರುದ್ಧ ಮೊಳಕಾಲ್ಮೂರು ಟಿಕೆಟ್ ಆಕಾಂಕ್ಷಿ ಯೋಗೇಶ್ ಬಾಬು ಬೆಂಬಲಿಗರು ಕೆಪಿಸಿಸಿ ಕಚೇರಿ ಎದುರು ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಗೋಪಾಲಕೃಷ್ಣ ಬೆಂಬಲಿಗರು ಕೂಡ ತಮ್ಮ ನಾಯಕನ ಪರ ಘೋಷಣೆ ಕೂಗಿದ್ದಾರೆ. ಒಂದು ಹಂತದಲ್ಲಿ ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ಗೆ ಮುತ್ತಿಗೆ ಹಾಕಲು ಯೋಗೇಶ್‍ಬಾಬು ಬೆಂಬಲಿಗರು ಪ್ರಯತ್ನಿಸಿದರು.
ಇದಕ್ಕೂ ಮುನ್ನ ತರಿಕೆರೆ ಟಿಕೆಟ್ ಆಕಾಂಕ್ಷಿ ಗೋಪಿಕೃಷ್ಣ ಬೆಂಬಲಿಗರು ಅರೆ ಬೆತ್ತಲಾಗಿ ಪ್ರತಿಭಟನೆ ಮಾಡಿದರು. ಕೆಲವರಂತೂ ವಿಷ ಕುಡಿಯಲು ಯತ್ನಿಸಿದಾಗ ಪೊಲೀಸರು ತಡೆಯಬೇಕಾಯ್ತು. ಕಾರ್ಯಕರ್ತರ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕರು ಇದೆಲ್ಲಾ ಕಾಂಗ್ರೆಸ್ ಅಭಿಮಾನಿಗಳು ಮಾಡುತ್ತಿರುವ ಹಕ್ಕೊತ್ತಾಯ ಅಷ್ಟೇ. ಇದನ್ನಲ್ಲ ನಾವು ಸರಿಪಡಿಸುತ್ತೇವೆ ಎಂದ್ರು.