ಇಂದೋರ್: ಮಧ್ಯಪ್ರದೇಶದ(Madhya Pradesh) ಉಜ್ಜಯಿನಿ(Ujjain) ಜಿಲ್ಲೆಯಲ್ಲಿ ಮಾನವೀಯತೆಯೇ ತಲೆತಗ್ಗಿಸುವಂತಹ ಅತ್ಯಂತ ಹೇಯ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಮೊದಲ ಗಂಡನನ್ನು ಬಿಟ್ಟು ತನಗಿಷ್ಟ ಬಂದ ಯುವಕನೊಂದಿಗೆ ವಾಸವಿದ್ದಳು ಎಂಬ ಕಾರಣಕ್ಕೆ ಮಹಿಳೆಯೊಬ್ಬಳನ್ನು ಗ್ರಾಮಸ್ಥರು ಹಾಗೂ ಆಕೆಯ ಜೊತೆಗಿದ್ದವನ ಕುಟುಂಬಸ್ಥರು ಸೇರಿ ಸಾರ್ವಜನಿಕವಾಗಿ ಅತ್ಯಂತ ಕ್ರೂರವಾಗಿ ಅವಮಾನಿಸಿದ್ದಾರೆ.
ಹೆಣ್ಣಿನ ಮೇಲೆ ಗ್ರಾಮಸ್ಥರ ಅಟ್ಟಹಾಸ
ಉಜ್ಜಯಿನಿಯಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಅರ್ನಿಯಾ ವೇಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜೂನ್ 30 ರಂದು ಜಾರ್ದಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಮಾನವೀಯ ಕೃತ್ಯ ನಡೆದಿದ್ದು, ಇಡೀ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನಡುರಸ್ತೆಯಲ್ಲಿ ಮಹಿಳೆಯನ್ನು ಎಳೆದೊಯ್ದು, ಬಲವಂತವಾಗಿ ಆಕೆಯ ಬಟ್ಟೆಗಳನ್ನು ಹರಿದು ಹಾಕಿ ಅರೆಬೆತ್ತಲೆ ಮಾಡಲಾಗಿದೆ. ಅಷ್ಟಕ್ಕೇ ನಿಲ್ಲದ ಕಾಮುಕರು ಆಕೆಯ ತಲೆಕೂದಲನ್ನು ಕತ್ತರಿಸಿ, ಮುಖಕ್ಕೆ ಮಸಿ ಬಳಿದು, ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಇಡೀ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ಮಹಿಳೆ ನೆಲದ ಮೇಲೆ ಕುಳಿತು ಕಣ್ಣೀರು ಹಾಕುತ್ತಿದ್ದರೂ ಕಿಂಚಿತ್ತೂ ಕರುಣೆ ತೋರದೇ ಆಕೆಯನ್ನು ತಳ್ಳಿ ದೌರ್ಜನ್ಯ ಎಸಗಲಾಗಿದೆ.
🚨Shameless Madhya Pradesh : Woman Humiliated in Ujjain Village
In Arniya Vega village of Ujjain a woman was publicly humiliated on June 30 2026
Villagers dragged her, shaved her head and put slippers around her neck
She had left her first husband and remarried a local youth… pic.twitter.com/klIyqxP4h3
— Ramesh Tiwari (@rameshofficial0) July 3, 2026
ದೌರ್ಜನ್ಯದ ಹಿಂದಿದೆ ಕೌಟುಂಬಿಕ ಕಲಹ ಮತ್ತು ಕೋರ್ಟ್ ಕೇಸ್
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಸಂತ್ರಸ್ತ ಮಹಿಳೆಗೆ ಸುಮಾರು 12 ರಿಂದ 14 ವರ್ಷಗಳ ಹಿಂದೆ ಇದೇ ಗ್ರಾಮದ ವ್ಯಕ್ತಿಯೊಬ್ಬನ ಜೊತೆ ಮದುವೆಯಾಗಿತ್ತು. ಆದರೆ ಕೌಟುಂಬಿಕ ಕಾರಣಗಳಿಂದಾಗಿ ಆಕೆ ಮೊದಲ ಗಂಡನನ್ನು ಬಿಟ್ಟು, ಮೂರ್ನಾಲ್ಕು ವರ್ಷಗಳ ಹಿಂದೆ ಗ್ರಾಮದ ಮತ್ತೊಬ್ಬ ಯುವಕನೊಂದಿಗೆ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ ವಾಸಿಸಲು ಆರಂಭಿಸಿದ್ದಳು. ಈ ನಡುವೆ ಆಕೆ ತನ್ನ ಜೊತೆಗಿದ್ದ ಯುವಕನ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದರಿಂದ ಆತ ಜೈಲು ಪಾಲಾಗಿದ್ದ. ಇತ್ತೀಚೆಗಷ್ಟೇ ಆತ ಜೈಲಿನಿಂದ ಬಿಡುಗಡೆಯಾಗಿ ಹೊರಬಂದಿದ್ದು, ಮಹಿಳೆ ಮತ್ತೆ ಆತನ ಜೊತೆಯೇ ಬಂದು ವಾಸಿಸಲು ಶುರು ಮಾಡಿದ್ದಾಳೆ. ಇದು ಆ ಯುವಕನ ತಂದೆ ಮತ್ತು ಸಂಬಂಧಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ಹಳೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಯುವಕನ ತಂದೆ ಹಾಗೂ ಸಂಬಂಧಿಕರು ಗ್ರಾಮಸ್ಥರೊಂದಿಗೆ ಸೇರಿ ಈ ಭೀಕರ ದಾಳಿ ನಡೆಸಿದ್ದಾರೆ.
ಮೂವರ ಬಂಧನ, ಇನ್ನೂ ಎಂಟು ಜನರಿಗಾಗಿ ತಲಾಷ್
ಈ ಗಂಭೀರ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಮೂವರು ಮಹಿಳೆಯರು ಸೇರಿದಂತೆ ಒಟ್ಟು 11 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯಕ್ಕೆ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದ್ದು, ಇಲಾಖೆಯು ತನಿಖೆಯನ್ನು ಚುರುಕುಗೊಳಿಸಿದೆ. ಘಟನೆಗೆ ಸಂಬಂಧಿಸಿದಂತೆ ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದು, ಕಾನೂನನ್ನು ಕೈಗೆತ್ತಿಕೊಂಡು ಮಹಿಳೆಯ ಮೇಲೆ ಮೃಗೀಯವಾಗಿ ವರ್ತಿಸಿದ ಯಾರಿಗೂ ವಿನಾಯಿತಿ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಪ್ಯಾಟೆ ಮಂದಿ ಕಾಡಿಗೆ ಬಂದ್ರು ಖ್ಯಾತಿಯ ಪದ್ದು ಗೌಡ ನಿಧನ