ನವದೆಹಲಿ: ಆಗ್ರಾದ ಪ್ರಮುಖ ಪತ್ರಿಕೆಯ ಮುಖ್ಯ ಸಂಪಾದಕರಾದ ವಿಜಯ್ ಶರ್ಮಾರ ಪತ್ನಿ ನೀಲಂ ಶರ್ಮಾ ಅವರನ್ನು ಫೆಬ್ರವರಿ 20, 2014 ರಂದು ಅವರ ಸ್ವಂತ ಮನೆಯಲ್ಲಿ ಕೊಲೆ ಮಾಡಲಾಗಿತ್ತು. ಬಳಿಕ ಮನೆಯಲ್ಲಿ ದರೋಡೆ ಮಾಡಲಾಗಿತ್ತು.
ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರಿಗೆ ಈ ಕೊಲೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದ್ರೆ ಅವರ ಮನೆಯಲ್ಲಿದ್ದ ಸಾಕು ಗಿಳಿ ಯಾವಾಗಲೂ ಶರ್ಮಾ ಅವರ ಸೋದರ ಸಂಬಂಧಿಯ ಹೆಸರನ್ನು ಪದೇ ಪದೇ ಕೂಗುತ್ತಿತ್ತು. ಇದರಿಂದ ಅನುಮಾನಗೊಂಡ ವಿಜಯ್ ಶರ್ಮಾ ಸೋದರ ಸಂಬಂಧಿಯನ್ನು ವಿಚಾರಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ವಿಚಾರಣೆ ವೇಳೆ ಸೋದರ ಸಂಬಂಧಿ ಆಶು, ತನ್ನ ಸ್ನೇಹಿತ ರೋನಿ ಮಾಸ್ಸಿ ಸಹಾಯದಿಂದ ನೀಲಂನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಕೊಲೆ ನಡೆದ ಒಂಬತ್ತು ವರ್ಷಗಳ ನಂತರ, ಅಂದರೆ ಮಾರ್ಚ್ 24 ರಂದು ನ್ಯಾಯಾಧೀಶರಾದ ಮೊಹಮ್ಮದ್ ರಶೀದ್ ಅವರು ಆರೋಪಿಗಳಿಗೆ ಶಿಕ್ಷೆಯನ್ನು ವಿಧಿಸಿದ್ದಾರೆ. ಆರೋಪಿಗಳಾದ ಆಶು ಮತ್ತು ರೋನಿ ಇಬ್ಬರಿಗೂ ಜೀವಾವಧಿ ಶಿಕ್ಷೆ ಹಾಗೂ 72,000 ರೂ. ದಂಡವನ್ನು ವಿಧಿಸಿದ್ದಾರೆ.
ಮಾಹಿತಿಯ ಪ್ರಕಾರ, ವಿಜಯ್ ಶರ್ಮಾ ಅವರು ಫೆಬ್ರವರಿ 20, 2014 ರಂದು ತಮ್ಮ ಮಗ ರಾಜೇಶ್ ಮತ್ತು ಮಗಳು ನಿವೇದಿತಾ ಅವರೊಂದಿಗೆ ಫಿರೋಜಾಬಾದ್‌ಗೆ ಮದುವೆಗೆಂದು ಹೋಗಿದ್ದರು.
ನೀಲಂ ಮನೆಯಲ್ಲಿ ಒಬ್ಬರೇ ಇದ್ದರು. ತಡರಾತ್ರಿ ವಿಜಯ್ ವಾಪಸಾದಾಗ ಪತ್ನಿ ಹಾಗೂ ಅವರ ಸಾಕು ನಾಯಿಯ ಕೊಲೆಯಾಗಿತ್ತು. ಹರಿತವಾದ ವಸ್ತುವಿನಿಂದ ಇಬ್ಬರನ್ನು ಹತ್ಯೆ ಮಾಡಲಾಗಿತ್ತು.
ಗಿಳಿಯ ಮುಂದೆ ಶಂಕಿತ ಆರೋಪಿಗಳ ಹೆಸರನ್ನು ಒಂದೊಂದಾಗಿ ಹೆಸರಿಸಲು ಪ್ರಾರಂಭಿಸಿದಾಗ, ಅದು ಆಶು ಹೆಸರನ್ನು ಕೇಳಿದ ತಕ್ಷಣ ಗಾಬರಿಗೊಂಡಿದೆ. ಅಲ್ಲದೇ “ಅಶು-ಅಶು” ಎಂದು ಕಿರುಚಲು ಪ್ರಾರಂಭಿಸಿತು. ಪೊಲೀಸರ ಮುಂದೆಯೂ ಗಿಳಿ ಆಶು ಹೆಸರಿಗೆ ಇದೇ ಪ್ರತಿಕ್ರಿಯೆ ನೀಡಿದಾಗ, ಅವನನ್ನು ಬಂಧಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆಯ ವೇಳೆಯೂ ತಿಳಿಸಿದ್ದಾರೆ.