ಕೇರಳದ ತ್ರಿಶೂರ್ ಜಿಲ್ಲೆಯ ಪೋಷಕರು ತಮಮ್ ಮಗನ ನೆನಪುಗಳನ್ನು ಜೀವಂತವಾಗಿರಿಸಲು ಮಾಡಿರುವ ಕೆಲಸ ಸಾಕಷ್ಟು ಗಮನ ಸೆಳೆದಿದೆ. ಕೇವಲ 26 ನೇ ವಯಸ್ಸಿಗೆ ಮೃತಪಟ್ಟ ಡಾ ಐವಿನ್ ಫ್ರಾನ್ಸಿಸ್ ಅವರ ಎಲ್ಲಾ ನೆನಪುಗಳನ್ನು ಅವರ ಸಮಾಧಿಯ ಮೇಲಿನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ವೀಕ್ಷಿಸಬಹುದಾದಂತ ವ್ಯವಸ್ಥೆಯನ್ನು ಅವರ ಪೋಷಕರು ಮಾಡಿದ್ದಾರೆ.
ಜಿಲ್ಲೆಯ ಕುರಿಯಾಚಿರಾದ ಸೇಂಟ್ ಜೋಸೆಫ್ ಚರ್ಚ್‌ನಲ್ಲಿರುವ ಡಾ. ಫ್ರಾನ್ಸಿಸ್ ಸಮಾಧಿಯ ಮೇಲೆ ಈ ಕ್ಯೂಆರ್ ಕೋಡ್ ಇದ್ದು, ಇದನ್ನು ಸ್ಕ್ಯಾನ್ ಮಾಡಿದರೆ, ಫ್ರಾನ್ಸಿಸ್ ಅವರ ವಿಡಿಯೋಗಳು, ಅವರು ನೀಡಿರುವ ಗಿಟಾರ್, ವಯಲಿನ್ ಪ್ರದರ್ಶನಗಳನ್ನು ಒಳಗೊಂಡ ವೆಬ್ ಪುಟವು ತೆರೆದುಕೊಳ್ಳುವಂತೆ ವಿನ್ಯಾಸ ಮಾಡಲಾಗಿದೆ.
ಒಮಾನ್‌ನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದ ಫ್ರಾನ್ಸಿಸ್ ಮತ್ತು ಒಮಾನ್‌ನ ಇಂಡಿಯನ್ ಶಾಲೆಯ ಪ್ರಿನ್ಸಿಪಾಲ್ ಲೀನಾ ಅವರ ಪುತ್ರನಾಗಿರುವ ಐವಿನ್, ಸಂಗೀತ ಮತ್ತು ಕ್ರೀಡೆಗಳಲ್ಲಿ ಸಕ್ರಿಯವಾಗಿದ್ದರು. ತಮ್ಮ ವೈದ್ಯಕೀಯ ಕಲಿಕೆಯ ನಡುವೆಯೂ ಪಠ್ಯೇತರ ಚಟುವಟಿಕೆಗಳಲ್ಲಿ ಅವರು ತೊಡಗಿಸಿಕೊಂಡಿದ್ದರು. ಸಮುದಾಯದೊಳಗೆ ಸಾಕಷ್ಟು ಜನಪ್ರಿಯಗೊಂಡಿದ್ದ ಅವರು 2021 ರಲ್ಲಿ ಬ್ಯಾಡ್ಮಿಂಟನ್ ಆಡುವಾಗ ಕುಸಿದು ಸಾವನ್ನಪ್ಪಿದರು.
ಆತ ಮಾಡಿದ ಸಾಧನೆಗಳನ್ನು ಸಮಾಧಿಯ ಮೇಲಿನ ಬರೆಹದಿಂದ ಪೂರ್ಣಗೊಳಿಸಲು ಸಾಧ್ಯವಿರಲಿಲ್ಲ, ಹಾಗಾಗಿ, ಆತನ ನೆನಪುಗಳನ್ನು, ಪ್ರದರ್ಶನಗಳನ್ನು ಸಂಯೋಜಿಸಿ ಕ್ಯೂಆರ್ ಕೋಡ್ ಅಳವಡಿಸಿದೆವು. ಅದನ್ನು ಸ್ಕ್ಯಾನ್ ಮಾಡುವ ಮೂಲಕ ಆತ ಏನಾಗಿದ್ದ, ಏನೆಲ್ಲಾ ಸಾಧನೆ ಮಾಡಿದ್ದ ಎನ್ನುವುದು ಜನರಿಗೆ ತಿಳಿಯಲಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.