ಬೆಂಗಳೂರು: ವಿಧಿಯ ಆಟ ನಿಜಕ್ಕೂ ಕ್ರೂರವಾದದ್ದು. ಇಂಜಿನಿಯರಿಂಗ್ ಕಾಲೇಜು ಸೇರಿ ದೊಡ್ಡ ಸಾಧನೆ ಮಾಡುವ ಕನಸು ಕಂಡಿದ್ದ 19 ವರ್ಷದ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ (Student) ಭೀಕರ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾನೆ. ಪುತ್ರನನ್ನು ಕಳೆದುಕೊಂಡ ದುಖಃದಲ್ಲೂ ಆತನ ಹೆತ್ತವರು ಮಹತ್ತರ ನಿರ್ಧಾರವೊಂದನ್ನು ಕೈಗೊಳ್ಳುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಮೃತ ಯುವಕನ ಅಂಗಾಂಗ ದಾನ ಮಾಡುವ ಮೂಲಕ ಬರೋಬ್ಬರಿ ಏಳು ಜನರಿಗೆ ಹೊಸ ಬದುಕು ನೀಡಿದ್ದಾರೆ ಎಂದು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕ ಎಸ್. ಸುರೇಶ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಣ್ಣ ಕೈಗಾರಿಕೋದ್ಯಮಿಯೊಬ್ಬರ ಏಕೈಕ ಪುತ್ರನಾಗಿದ್ದ ಸಂಜನ್ ಎಲ್. (19), ಇತ್ತೀಚೆಗಷ್ಟೇ ಪಿಯುಸಿ ಪರೀಕ್ಷೆಯಲ್ಲಿ ಕಾರ್ಮೆಲ್ ಕಾಲೇಜಿಗೆ ಅತ್ಯಧಿಕ ಅಂಕ ತಂದುಕೊಟ್ಟ ಹೆಮ್ಮೆಯ ವಿದ್ಯಾರ್ಥಿ. ಕಳೆದ ಬುಧವಾರ (ಜುಲೈ 8) ರಾತ್ರಿ ಸಂಜನ್ ತನ್ನ ತಂದೆ, ತಾಯಿ ಹಾಗೂ ಅಜ್ಜಿಯೊಂದಿಗೆ ತಮಿಳುನಾಡಿನ ವಿವಿಧ ಪುಣ್ಯಕ್ಷೇತ್ರಗಳ ದರ್ಶನ ಮುಗಿಸಿ ಹೆಮ್ಮೆಯಿಂದ ಮನೆಗೆ ಮರಳುತ್ತಿದ್ದರು. ಆದರೆ ಹೊಸೂರು ಬಳಿಯ ರಾಯಕೋಟೆ ಹತ್ತಿರ ಬರುತ್ತಿದ್ದಂತೆ ಯಮರೂಪಿಯಾಗಿ ಬಂದ ಟಿಪ್ಪರ್ ಲಾರಿಯೊಂದು ಭೀಕರವಾಗಿ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಸಂಜನ್ ತೀವ್ರವಾಗಿ ಗಾಯಗೊಂಡಿದ್ದ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಪಘಾತದಲ್ಲಿ ಸಂಜನ್ ಮೆದುಳು ಸಂಪೂರ್ಣವಾಗಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ (Brain Dead), ನಿನ್ನೆ ಸಂಜೆ ಅವರು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾನೆ.
ತಮ್ಮ ಕಣ್ಣೆದುರೇ ಒಬ್ಬನೇ ಮಗ ಕೊನೆಯುಸಿರೆಳೆದ ದುಃಖದಲ್ಲಿದ್ದ ಪೋಷಕರು ಸಂಜನ್‌ನ ವಿವಿಧ ಪ್ರಮುಖ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ನೀಡಿದರು. ಈ ಒಂದು ನಿರ್ಧಾರದಿಂದಾಗಿ ಇಂದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಏಳು ಜನರಿಗೆ ಹೊಸ ಜೀವ ಮತ್ತು ಆಸರೆ ಸಿಕ್ಕಂತಾಗಿದೆ.
ಇಂದು ನಡೆದ ಸಂಜನ್ ಅಂತಿಮ ದರ್ಶನದ ವೇಳೆ ಇಡೀ ವಾತಾವರಣವೇ ಶೋಕ ಸಾಗರದಲ್ಲಿ ಮುಳುಗಿತ್ತು. ಸಂಜನ್ ಓದಿದ್ದ ಕಾರ್ಮೆಲ್ ಕಾಲೇಜಿನ ಶಿಕ್ಷಕರು ಹಾಗೂ ಸಹಪಾಠಿಗಳು, ಕ್ಷೇತ್ರದ ಪ್ರಮುಖ ರಾಜಕೀಯ ಮುಖಂಡರು ಹಾಗೂ ಗಣ್ಯರು ಸಂಜನ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ, ಮಗನನ್ನು ಕಳೆದುಕೊಂಡ ಪೋಷಕರಿಗೆ ಸಾಂತ್ವನ ಹೇಳಿದರು. ಹೆತ್ತ ಮಗನ ಸಾವಿನಲ್ಲೂ ಜಗತ್ತಿಗೆ ಬೆಳಕಾದ ಆ ದಂಪತಿಯ ಹೃದಯವಂತಿಕೆಗೆ ಇಡೀ ನಾಡು ನಮಿಸುತ್ತಿದೆ.