ಲಾಹೋರ್: ನೆರೆರಾಷ್ಟ್ರ ಪಾಕಿಸ್ತಾನದಲ್ಲಿ (Pakistan) ಇಬ್ಬರು ವಿದೇಶಿ ಮಹಿಳೆಯರ (Foreigners) ಮೇಲೆ ನಡೆದ ಆಘಾತಕಾರಿ ಸಾಮೂಹಿಕ ಅತ್ಯಾಚಾರ (Sexual Harassment) ಮತ್ತು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವರಾಗಿರುವ ಇಶಾಕ್ ದಾರ್ ಅವರ ಆಪ್ತ ಸಂಬಂಧಿಯನ್ನು ಪೊಲೀಸರು ಬಂಧಿಸಿದ್ದಾರೆ.
ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ಈ ಹೈಪ್ರೊಫೈಲ್ ಮತ್ತು ಸೂಕ್ಷ್ಮ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಲಾಹೋರ್ ಪೊಲೀಸರು ಹೆಡೆಮುರಿಕಟ್ಟಿದ್ದು, ನ್ಯಾಯಾಲಯವು ಅವರನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಈ ಘೋರ ಕೃತ್ಯಕ್ಕೆ ಸಂಬಂಧಿಸಿದಂತೆ ಮುಹಮ್ಮದ್ ರಜಾ ದಾರ್, ಹಸನ್ ರಜಾ, ಸಿಕಂದರ್ ಖಾನ್ ಮತ್ತು ಸಾಜಿದ್ ಅಲಿ ಎಂಬುವವರನ್ನು ಬಂಧಿಸಲಾಗಿದೆ. ಇವರಲ್ಲಿ ಪ್ರಮುಖ ಶಂಕಿತನಾಗಿರುವ ಮುಹಮ್ಮದ್ ರಜಾ ದಾರ್, ಪಾಕಿಸ್ತಾನದ ಉಪಪ್ರಧಾನಿ ಇಶಾಕ್ ದಾರ್ ಅವರ ಹತ್ತಿರದ ಸಂಬಂಧಿಯಾಗಿದ್ದಾನೆ.
ಪ್ರಭಾವಿ ರಾಜಕಾರಣಿಯ ಕುಟುಂಬದವರೇ ಈ ಗಂಭೀರ ಪ್ರಕರಣದಲ್ಲಿ ಭಾಗಿಯಾಗಿರುವುದರಿಂದ ಪಾಕಿಸ್ತಾನ ಸರ್ಕಾರ ಹಾಗೂ ಪೊಲೀಸರಿಗೆ ಭಾರಿ ಮುಜುಗರ ಉಂಟಾಗಿದ್ದು, ಪೊಲೀಸರು ಸದ್ಯ ಇಡೀ ಪ್ರಕರಣವನ್ನು ಅತ್ಯಂತ ರಹಸ್ಯವಾಗಿ ಹಾಗೂ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.
ಕ್ರಿಪ್ಟೋ ಉದ್ಯಮದ ಸ್ನೇಹ, ಅಪಹರಣ ಮತ್ತು ಅತ್ಯಾಚಾರ:
ಲಂಡನ್ ಮೂಲದವರಾದ ಹಾಗೂ ನೆದರ್‌ಲ್ಯಾಂಡ್ಸ್ ಮತ್ತು ವೆನೆಜುವೆಲಾ ಪೌರತ್ವ ಹೊಂದಿರುವ ಇಬ್ಬರು ವಿದೇಶಿ ಮಹಿಳೆಯರು ಈ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರಾಗಿದ್ದಾರೆ. ಪ್ರಮುಖ ಆರೋಪಿ ರಜಾ ದಾರ್ ಈ ಮಹಿಳೆಯರನ್ನು 2025ರ ಅಕ್ಟೋಬರ್‌ನಲ್ಲಿ ಸಿಂಗಾಪುರದಲ್ಲಿ ಭೇಟಿಯಾಗಿದ್ದನು.
ಅವರೆಲ್ಲರೂ ಕ್ರಿಪ್ಟೋಕರೆನ್ಸಿ ಉದ್ಯಮದಲ್ಲಿ ಪಾಲುದಾರರಾಗಿದ್ದರು. ಉದ್ಯಮದ ನೆಪದಲ್ಲೇ ಮಹಿಳೆಯರನ್ನು ಪಾಕಿಸ್ತಾನಕ್ಕೆ ಬರುವಂತೆ ರಜಾ ದಾರ್ ಆಹ್ವಾನ ನೀಡಿದ್ದಲ್ಲದೆ, ಅವರಿಗಾಗಿ ಬಿಸಿನೆಸ್ ವೀಸಾಗಳನ್ನು ಕೂಡ ತಾನೇ ಖುದ್ದಾಗಿ ವ್ಯವಸ್ಥೆ ಮಾಡಿದ್ದನು.
ಅದರಂತೆ ಜೂನ್ 29 ರಂದು ಈ ಇಬ್ಬರು ಮಹಿಳೆಯರು ಲಾಹೋರ್ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದರು. ಆದರೆ, ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ರಜಾ ದಾರ್ ಮತ್ತು ಆತನ ಐದು ಜನರ ಗ್ಯಾಂಗ್ ಮಹಿಳೆಯರನ್ನು ಬಲವಂತವಾಗಿ ಅಪಹರಿಸಿ ರಹಸ್ಯ ನಿವಾಸವೊಂದಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಇಬ್ಬರ ಮೇಲೂ ಭೀಕರವಾಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೆ, ಅವರನ್ನು ಬಿಡುಗಡೆ ಮಾಡಲು ಭಾರಿ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟು ಒತ್ತೆ ಇರಿಸಿಕೊಂಡಿದ್ದರು ಎಂದು ಸಂತ್ರಸ್ತ ಮಹಿಳೆಯರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ತುಮಕೂರಿನಲ್ಲಿ ಭೀಕರ ದುರಂತ: SIR ಚುನಾವಣಾ ಕೆಲಸಕ್ಕೆ ತೆರಳುತ್ತಿದ್ದ ಮಹಿಳಾ ವಿಎಒ ಅಪಘಾತಕ್ಕೆ ಬಲಿ!
ಸ್ಪೇನ್‌ನಿಂದ ಬಂದ ಕರೆಯಿಂದ ರಕ್ಷಣೆ:
ಬಂಧನದಲ್ಲಿದ್ದ ಮಹಿಳೆಯರ ಪೈಕಿ ಒಬ್ಬಾಕೆಯ ತಂದೆಗೆ ಹೇಗೋ ವಿಷಯ ತಿಳಿದು, ಅವರು ತಕ್ಷಣವೇ ಸ್ಪೇನ್‌ನಿಂದ ಪಾಕಿಸ್ತಾನ ಪೊಲೀಸರಿಗೆ ತುರ್ತು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಲಾಹೋರ್ ಪೊಲೀಸರು ಕಾರ್ಯಾಚರಣೆ ನಡೆಸಿ ಮಹಿಳೆಯರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಐವರು ಶಂಕಿತರ ವಿರುದ್ಧ ಪಾಕಿಸ್ತಾನ ದಂಡ ಸಂಹಿತೆಯ ಸೆಕ್ಷನ್ 365A (ಅಪಹರಣ) ಮತ್ತು 375A (ಸಾಮೂಹಿಕ ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ನಾಲ್ವರನ್ನು ಜೈಲಿಗಟ್ಟಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಐದನೇ ಆರೋಪಿ ಸದ್ಯ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.