ಪಾಕಿಸ್ತಾನ : ಪಾಕಿಸ್ತಾನದ (Pakistan) ಬಲೂಚಿಸ್ತಾನ (Balochistan) ಪ್ರಾಂತ್ಯದ ಗ್ವಾದರ್ ಜಿಲ್ಲೆಯ ಜಿವಾನಿ ಎಂಬಲ್ಲಿ ಪಾಕಿಸ್ತಾನ ಕೋಸ್ಟ್ ಗಾರ್ಡ್ ಶಿಬಿರದ ಮೇಲೆ ಭೀಕರ ಆತ್ಮಹತ್ಯಾ ದಾಳಿ (Attack) ನಡೆದಿದೆ.
ನಿಷೇಧಿತ ಬಲೂಚ್ ಲಿಬರೇಷನ್ ಆರ್ಮಿ (BLA) ಈ ದಾಳಿಯ ಹೊಣೆ ಹೊತ್ತುಕೊಂಡಿದ್ದು, ಘಟನೆಯಲ್ಲಿ 30ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಬಿಎಲ್‌ಎ ಸಂಘಟನೆಯ ಮಜೀದ್ ಬ್ರಿಗೇಡ್‌ಗೆ ಸೇರಿದ ಆತ್ಮಹತ್ಯಾ ಬಾಂಬರ್, ಸ್ಫೋಟಕಗಳನ್ನು ತುಂಬಿದ್ದ ಭಾರಿ ವಾಹನವನ್ನು ಕೋಸ್ಟ್ ಗಾರ್ಡ್ ಶಿಬಿರಕ್ಕೆ ನುಗ್ಗಿಸಿ ಸ್ಫೋಟಿಸಿದ್ದಾನೆ. ಇದರ ಬೆನ್ನಲ್ಲೇ ಸಂಘಟನೆಯ ಇತರ ಬಂದೂಕುಧಾರಿಗಳು ಸೈನಿಕರ ಮೇಲೆ ಜಂಟಿ ಗುಂಡಿನ ದಾಳಿ ನಡೆಸಿದ್ದಾರೆ. ಸ್ಫೋಟದ ತೀವ್ರತೆಗೆ ಇಡೀ ಸೇನಾ ಶಿಬಿರವೇ ಧ್ವಂಸಗೊಂಡಿದೆ.
ಬಲೂಚಿಸ್ತಾನದ ನೈಸರ್ಗಿಕ ಸಂಪನ್ಮೂಲಗಳನ್ನು ಪಾಕಿಸ್ತಾನ ಸರ್ಕಾರ ಹಾಗೂ ಚೀನಾ ಜಂಟಿಯಾಗಿ ಲೂಟಿ ಮಾಡುತ್ತಿವೆ ಎಂದು ಬಲೂಚ್ ಬಂಡುಕೋರರು ಆರೋಪಿಸುತ್ತಿದ್ದಾರೆ. ಚೀನಾದ ಬಿಲಿಯನ್ ಡಾಲರ್ ಹೂಡಿಕೆಯ ಸಿಪಿಇಸಿ (CPEC) ಯೋಜನೆಯ ಕೇಂದ್ರವಾಗಿರುವ ಗ್ವಾದರ್ ಬಂದರು ಪ್ರದೇಶದಲ್ಲೇ ಈ ದಾಳಿ ನಡೆದಿರುವುದು ಪಾಕ್ ಸರ್ಕಾರಕ್ಕೆ ಆತಂಕ ತಂದಿದೆ.
ದಾಳಿಯ ಭೀಕರ ವಿಡಿಯೋವನ್ನು ಬಿಎಲ್‌ಎ ಬಿಡುಗಡೆ ಮಾಡಿದ್ದರೂ, ಪಾಕಿಸ್ತಾನದ ಮಿಲಿಟರಿ ಮಾತ್ರ ತನ್ನ ಸೈನಿಕರ ನಿಖರ ಸಾವಿನ ಸಂಖ್ಯೆಯನ್ನು ಮುಚ್ಚಿಡಲು ಯತ್ನಿಸುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಗಾಯಗೊಂಡ ಹಲವು ಸೈನಿಕರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.