ದಾವಣಗೆರೆ : ರಾಜ್ಯ ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿ ಕಲಹ ಜೋರಾಗಿದೆ. ಇತ್ತ ಬಿಜೆಪಿಯಲ್ಲೂ ಬಡಿದಾಟ ಶುರುವಾಗಿದೆ. ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ಅಸಮಾಧಾನ ಸ್ಫೋಟಕಗೊಂಡಿದೆ. ಈ ಬಾರಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ (BS Yediyurappa) ನಡೆಯಿಂದಲೇ ಅಸಮಾಧಾನ ಭುಗಿಲೆದ್ದಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಅಷ್ಟರಲ್ಲೇ ಯಡಿಯೂರಪ್ಪ ತಮ್ಮ ಬೆಂಬಲಿಗರಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ.
ಹೊನ್ನಾಳಿಯಲ್ಲಿ ನಡೆದ ರೇಣುಕಾಚಾರ್ಯ ಜನ್ಮ ದಿನ ಕಾರ್ಯಕ್ರಮದಲ್ಲಿ ಪಕ್ಕದ ಹರಪನಹಳ್ಳಿ ಸೇರಿ ದಾವಣಗೆರೆ ಜಿಲ್ಲೆಯ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದ್ದಾರೆ. ಇದರಿಂದ ಸ್ವಪಕ್ಷೀಯ ಮುಖಂಡರು ಯಡಿಯೂರಪ್ಪ ವಿರುದ್ಧ ತಿರುಗಿಬಿದ್ದಿದ್ದು, ಹೊನ್ನಾಳಿಯಲ್ಲಿ ಮಾಡಿದ ಘೋಷಣೆಯನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.
ಹಲವು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ
ಹೊನ್ನಾಳಿಗೆ ಎಂಪಿ ರೇಣುಕಾಚಾರ್ಯ, ಚನ್ನಗಿರಿಗೆ ಮಾಡಾಳ್ ವಿರೂಪಾಕ್ಷಪ್ಪ, ಹರಿಹರ ಚಂದ್ರಶೇಖರ್ ಪೂಜಾರ್, ದಾವಣಗೆರೆ ಉತ್ತರಕ್ಕೆ ಲೋಕಕೆರೆ ನಾಗರಾಜ್, ಜಗಳೂರಿಗೆ ಎಸ್ ವಿ ರಾಮಚಂದ್ರ ಹಾಗೂ ಹರಪನಹಳ್ಳಿಗೆ ಕರುಣಾಕರ ರೆಡ್ಡಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ.
ದಾವಣಗೆರೆ ಬಿಜೆಪಿಯಲ್ಲಿ ಮಹಾ ಸಮರ
2024ರ ಲೋಕಸಭೆ ಚುನಾವಣೆಯಿಂದ ದಾವಣಗೆರೆ ಬಿಜೆಪಿ ಮನೆಯೊಂದು ಮೂರು ಬಾಗಿಲು ಆಗಿದೆ. ಒಂದಾಗುವುದು ಕಷ್ಟದ ಕೆಲಸ ಎಂಬ ಮಾತುಗಳು ಕೇಳಿ ಬರುತ್ತಿವೆ. ಮಾಜಿ ಸಂಸದ ಜಿಎಂ ಸಿದ್ದೇಶ್ವರ ಹಾಗೂ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಬಣಗಳನ್ನ ಒಂದು ಮಾಡುವ ಜವಾಬ್ದಾರಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೆ ವಹಿಸಲಾಗಿತ್ತು. ಮೃದು ಸ್ವಭಾವದ ಶೆಟ್ಟರ್ ಹೇಳುವಷ್ಟು ಹೇಳಿ ಮೌನಕ್ಕೆ ಶರಣಾಗಿದ್ದಾರೆ.
ಅಸಮಾಧಾನ ಹೊರ ಹಾಕಿದ ಬಿಜೆಪಿ ನಾಯಕ
‘ಇತ್ತೀಚೆಗೆ ಹೊನ್ನಾಳಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಯಡಿಯೂರಪ್ಪ, ಜಿಲ್ಲೆಯ ಹಲವು ಕ್ಷೇತ್ರಗಳ ಬಿಜೆಪಿಯ ಸಂಭವನೀಯ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದಾರೆ. ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಎಂ.ಪಿ. ರೇಣುಕಾಚಾರ್ಯ ಅವರನ್ನು ಸಚಿವರನ್ನಾಗಿ ಮಾಡುವಂತೆ ಕೋರಿದ್ದಾರೆ. ಪಕ್ಷದ ಶಿಷ್ಟಾಚಾರವನ್ನು ಉಲ್ಲಂಘಿಸುವಂತಹ ಹೇಳಿಕೆಯನ್ನು ಯಡಿಯೂರಪ್ಪ ಅವರಿಂದ ನಿರೀಕ್ಷಿಸಿರಲಿಲ್ಲ’ ಎಂದು ದಾವಣಗೆರೆ ಬಿಜೆಪಿ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಶಾಂತರಾಜ್ ಪಾಟೀಲ ಬೇಸರ ಹೊರ ಹಾಕಿದ್ದಾರೆ.
ವರಿಷ್ಠರ ಗಮನಕ್ಕೆ ತರಲು ತೀರ್ಮಾನ
ಯಡಿಯೂರಪ್ಪ ಹೇಳಿಕೆಗೆ ದಾವಣಗೆರೆ ಬಿಜೆಪಿ ಬಿ ಟೀಮ್ ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನ ಖಂಡಿಸಿ ಇನ್ನೊಂದು ಬಿಜೆಪಿ ಬಣ ಇದೇ ಮಾರ್ಚ್ 5ರಂದು ಜಿಎಂ ಐಟಿ ಕಾಲೇಜ್ ಅತಿಥಿ ಗೃಹದಲ್ಲಿ ಪ್ರತಿಭಟನಾ ಸಭೆಗೆ ಮುಂದಾಗಿದೆ. ಮಾಜಿ ಸಂಸದ ಜಿಎಂ ಸಿದ್ದೇಶ್ವರ ಹಾಗೂ ಹಾಲಿ ಶಾಸಕ ಬಿಪಿ ಹರೀಶ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ತಮ್ಮ ವಿಚಾರವನ್ನ ಪಕ್ಷದ ವರಿಷ್ಠರ ಗಮನಕ್ಕೆ ತರಲುಪಿಸಲು ನಿರ್ಧರಿಸಲಾಗಿದೆ. ಇನ್ನು ಪ್ರತಿಭಟನಾ ಸಭೆ ಮಾಡುವ ದಿನವೇ ಜಿಲ್ಲಾ ಬಿಜೆಪಿ ಕಚೇರಿಗೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ಬರುತ್ತಿದ್ದಾರೆ. ಈ ವೇಳೆ ಈ ವಿಚಾರವನ್ನು ಅವರ ಗಮನಕ್ಕೆ ತರಲು ಸಹ ತೀರ್ಮಾನ ಮಾಡಿದ್ದಾರೆ.
ಇದನ್ನೂ ಓದಿ: ರಾಜ್ಯಸಭೆ ರಣಾಂಗಣಕ್ಕೆ ಬಿಜೆಪಿ ಸಜ್ಜು, ರಾಷ್ಟ್ರೀಯ ಅಧ್ಯಕ್ಷ ನಬಿನ್ ಸೇರಿ 9 ಸ್ಪರ್ಧಿಗಳು ಕಣಕ್ಕೆ