ಮಂಗಳೂರು : ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕ್ ಮೇಲೆ ನಡೆಸಿದ ದಾಳಿ ದೇಶ ಮಾತ್ರವಲ್ಲ ವಿಶ್ವವೇ ಕೊಂಡಾಡಿದ್ದು, ಇದೀಗ ಈ ಬಗ್ಗೆ ಕರಾವಳಿಯ ಗಂಡುಕಲೆ ಯಕ್ಷಗಾನದಲ್ಲಿ ಆಪರೇಷನ್ ಸಿಂಧೂರ್ ಬಗ್ಗೆ ಮಾತನಾಡಿರುವುದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಈ ಬಗ್ಗೆ ಕಾರ್ಕಳ ಶಾಸಕ ಸುನೀಲ್ ಕುಮಾರ್ ಕಾರ್ಕಳ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಪಾವಂಜೆ ಮೇಳದಲ್ಲಿ ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಆಪರೇಷನ್ ಸಿಂಧೂರದ ಬಗ್ಗೆ ಮಾತನಾಡುತ್ತಿರುವುದು ಕಾಣಬಹುದು.
ಈ ಪವಿತ್ರವಾದ ನೆಲದಲ್ಲಿ ನಾನು ಹುಟ್ಟಿದವ. ಪವಿತ್ರವಾದ ಸಂಸ್ಕಾರವನ್ನು ಪಡೆದವ. ಈ ನೆಲಕ್ಕೆ ತಾಯಿಯೆಂದು ನಾವು ಕರೆಯುತ್ತೇವೆ. ತಾಯಿಯೆಂದು ಕರೆಯುವ ಈ ನೆಲ ಇದು ಬಿಟ್ರೆ ಇನ್ನೊಂದಿಲ್ಲ. ಹೀಗಾಗಿ ನಮಗೆ ದೇಶ ಪ್ರೇಮವನ್ನು ಕಲಿಸಿದೆ. ಬಿಟ್ರೆ ದೇಶ ದ್ರೋಹ ಮಾಡುವುದನ್ನು ಕಲಿಸುವುದಿಲ್ಲ ಎಂದು ಹೇಳಿದರು.
ಈ ವೇಳೆ ಸ್ತ್ರಿ ವೇಷದಾರಿಯೊಬ್ಬರು ಈ ತಾಯಿಯ ಸಿಂಧೂರ ಅಳಿಸಲು ಬಂದರೆ ಏನು ಮಾಡೋದು ಎಂಬ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಲಾವಿದ ದಿನೇಶ್ ಶೆಟ್ಟಿ, ತಾಯಿಯ ಸಿಂಧೂರವನ್ನು ಒರೆಸುತ್ತೇನೆಂದು ಬಂದರೆ, ಈ ನೆಲದ ಒಬ್ಬಳು ಹೆಣ್ಣಿನ ಸಿಂಧೂರ ಒರೆಸಿದರೆ ವೈರಿಗಳ ಸಾವಿರ ಸಾವಿರ ಮಡದಿಯದರ ಸಿಂಧೂರ ಅಳಿಸುವುದಕ್ಕೆ ನಾವೆಲ್ಲಾ ಸಿದ್ಧರಾಗಿ ನಿಂತಿದ್ದೇವೆ ಎಂದು ಹೇಳಿದರು.
ಕಲಾವಿದ ದಿನೇಶ್ ಶೆಟ್ಟಿಯವರ ಈ ಮಾತು ಕೇಳುತ್ತಿದ್ದಂತೆ ಯಕ್ಷಗಾನ ನೋಡಲೆಂದು ಆಗಮಿಸಿದ್ದ ಜನರು ಜೋರಾಗಿ ಕಿರುಚುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.