ಹಾಸನ: ಆನ್‌ಲೈನ್ ಗೇಮ್ ಚಟಕ್ಕೆ ಬಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಆಘಾತಕಾರಿ ಘಟನೆ ಹಾಸನದಲ್ಲಿ ನಡೆದೆ.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಚೋಕನಹಳ್ಳಿ ಎಂಬ ಗ್ರಾಮದ ರಾಕೇಶ್ ಗೌಡ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ಆನ್‌ಲೈನ್ ಗೇಮ್ ಆಡುತ್ತಾ ರಾಕೇಶ್ ಲಕ್ಷಾಂತರ ರೂ. ಹಣವನ್ನು ಕಳೆದುಕೊಂಡಿದ್ದ. ನಂತರ ತನ್ನ ಸ್ನೇಹಿತರ ಬಳಿಯೂ ಸಾಲ ಮಾಡಿದ್ದ.
ನಂತರ ರಾಕೇಶ್ ತಾನು ಕೆಲಸ ಮಾಡುತ್ತಿದ್ದ ಫೈನಾನ್ಸ್ ಕಚೇರಿಯ ಒಂದು ಲಕ್ಷ ಹಣವನ್ನ ದುರುಪಯೋಗ ಮಾಡಿಕೊಂಡಿದ್ದ. ಈ ಹಣವನ್ನು ವಾಪಸ್ ಕಟ್ಟುವಂತೆ ಕಚೇರಿಯವರು ಕಾಟ ಕೊಟ್ಟಿದ್ದಾರೆ. ಆದರೆ ಹಣವನ್ನು ವಾಪಸ್ ಕೊಡಲಾಗದೆ ಹಾಗೂ ಸಾಲ ತೀರಿಸಲಾಗಿದೆ ಆತ ಬೇಲೂರಿನ ಖಾಸಗಿ ಲಾಡ್ಜ್ ಒಂದರ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವರದಿಗಳ ಪ್ರಕಾರ ರಾಕೇಶ್ ಒಂದು ದಿನ ಮಾತ್ರ ರೂಂ ಬಾಡಿಗೆ ಪಡೆದಿದ್ದ. ಆದರೆ ಎರಡು ದಿನವಾದರೂ ಆತ ಆಚೆ ಬರದಿದ್ದಾಗ ಲಾಡ್ಜ್ ಸಿಬ್ಬಂದಿ ಬೀಗ ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ರೂಂನಲ್ಲಿ ಡೆತ್ ನೋಟ್ ಕೂಡಾ ಪತ್ತೆಯಾಗಿದ್ದು, ಅದರಲ್ಲಿ ಆತ, ಆನ್‌ಲೈನ್ ಗೇಮ್ ಆಡಿ, ಸಾಕಷ್ಟು ಸಾಲ ಮಾಡಿದ್ದೆ. ಅದನ್ನು ತೀರಿಸಲಾಗದೆ ಈ ನಿರ್ಧಾರ ಮಾಡಿದ್ದಾಗಿ ತಿಳಿಸಿದ್ದಾನೆ.