ಲಂಡನ್ ನಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ರಾಹುಲ್ ಗಾಂಧಿ ಅವರು ನೀಡಿರುವ ಹೇಳಿಕೆಗಳ ಕುರಿತು ಸಂಸತ್ತಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವಿನ ವಾಗ್ದಾಳಿ ಮುಂದುವರಿದಿದ್ದು, ಲೋಕಸಭೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿರುದ್ಧ ವಿಶೇಷ ಹಕ್ಕು ಉಲ್ಲಂಘನೆ ಪ್ರಸ್ತಾಪವನ್ನು ಕಾಂಗ್ರೆಸ್ ನೀಡಿದೆ.
ಮಾರ್ಚ್ 13 ರಂದು ಸಂಸತ್ತಿನಲ್ಲಿ ರಾಜನಾಥ್ ಸಿಂಗ್ ಅವರು ಮಾಡಿರುವ ಭಾಷಣದಲ್ಲಿ ರಾಹುಲ್ ಗಾಂಧಿ ವಿರುದ್ಧ ನೀಡಿದ ಹೇಳಿಕೆಗಳು ಅಸಂಸದೀಯ ಮತ್ತು ಅವಹೇಳನಕಾರಿ ಎಂದು ಕರೆದಿರುವ ಕಾಂಗ್ರೆಸ್ ಸಂಸದ ಮಾಣಿಕ್ಕಂ ಠಾಗೋರ್ ಅವರು ರಾಜನಾಥ್ ಸಿಂಗ್ ವಿರುದ್ಧ ನೋಟಿಸ್ ನೀಡಿದ್ದಾರೆ.
ರಾಜನಾಥ್ ಸಿಂಗ್ ಅವರು ಲೋಕಸಭೆಯನ್ನು ಉದ್ದೇಶಿಸಿ ಯಾವುದೇ ಮುಂಗಡ ಸೂಚನೆ ನೀಡದೆ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ರಾಜನಾಥ್ ಸಿಂಗ್ ಅವರು ಲೋಕಸಭಾ ಕಾನೂನಿನ ನಿಯಮ 352 (ii) ಮತ್ತು ನಿಯಮ 353 ಅನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ಠಾಗೋರ್ ನೋಟಿಸ್‌ನಲ್ಲಿ ಆರೋಪಿಸಿದ್ದಾರೆ.
ರಾಜನಾಥ್ ಸಿಂಗ್ ಅವರು ರಾಹುಲ್ ಗಾಂಧಿ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡುವಾಗ, ಅವರು ಮಾಹಿತಿಯನ್ನು ಸಂಗ್ರಹಿಸಿರುವ ಯಾವುದೇ ಮೂಲವನ್ನು ಒದಗಿಸಿಲ್ಲ, ಹಾಗೂ ರಾಹುಲ್ ಗಾಂಧಿ ವಿರುದ್ಧದ ಅವರ ಹೇಳಿಕೆಗಳನ್ನು ಬೆಂಬಲಿಸುವ ಯಾವುದೇ ಸಾಕ್ಷ್ಯವನ್ನು ಅವರು ಪ್ರಸ್ತುತಪಡಿಸಿಲ್ಲ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಸಂಸತ್ತಿನಲ್ಲಿ ತಮ್ಮ ವಾದ ಮಂಡಿಸಲು ರಾಹುಲ್ ಗಾಂಧಿಗೆ ಅವಕಾಶವನ್ನೂ ನೀಡಿಲ್ಲ. ಹಾಗಾಗಿ, ಆರೋಪದ ಬಗ್ಗೆ ಇನ್ನೂ ಸ್ಪಷ್ಟನೆ ನೀಡಲು ಸಾಧ್ಯವಾಗಿಲ್ಲ. ಸಂಸತ್ ಸದಸ್ಯರಿಗೆ ಈ ರೀತಿಯ ಅವಮಾನವು ಸಂಸದೀಯ ಸಂಪ್ರದಾಯಗಳಿಗೆ ಅನುಗುಣವಾಗಿಲ್ಲ ಎಂದು ಠಾಗೋರ್ ಹೇಳಿದ್ದಾರೆ.