ಬೆಂಗಳೂರು: ರಸ್ತೆಯಲ್ಲಿ ಕಳ್ಳರಿದ್ದಾರೆ ಎಂದು ಹೆದರಿಸಿ, ಸುರಕ್ಷತೆಯ ನೆಪದಲ್ಲಿ ವೃದ್ಧೆಯ ಮೈಮೇಲಿದ್ದ ಒಡವೆಗಳನ್ನು ಕಳ್ಳರು ದೋಚಿರುವ(Gold robbery) ಪ್ರಕರಣವೊಂದು ಬೆಂಗಳೂರಿನ(Bengaluru) ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೈಕ್‌ನಲ್ಲಿ(Bike) ಬಂದ ನಾಲ್ವರು ಕಳ್ಳರು ವೃದ್ಧೆಯ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ ಮತ್ತು ಉಂಗುರಗಳನ್ನು ಕದ್ದಿದ್ದು, ಇಡೀ ಕೃತ್ಯ ಸಿಸಿಟಿವಿ(CCTV) ಕ್ಯಾಮರಾದಲ್ಲಿ ಸೆರೆಯಾಗಿದೆ.
ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಲ್ಲಾಪುರದ ಬಳಿ ಈ ದರೋಡೆ ನಡೆದಿದೆ. ಬೆಂಗಳೂರು ನಿವಾಸಿಯಾದ ಗಾಯಿತ್ರಿ ಎಂಬ ವೃದ್ಧೆ ಚಿನ್ನಾಭರಣ ಕಳೆದುಕೊಂಡ ದುರ್ದೈವಿ. ವೃದ್ಧೆ ಗಾಯಿತ್ರಿ ಸ್ಥಳೀಯ ಮೆಡಿಕಲ್ ಶಾಪ್ ಒಂದರಲ್ಲಿ ತಮಗೆ ಬೇಕಾದ ಮಾತ್ರೆಗಳನ್ನು ಖರೀದಿಸಿ ವಾಪಸ್ ತಮ್ಮ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಎರಡು ಬೈಕುಗಳಲ್ಲಿ ಇವರನ್ನು ಹಿಂಬಾಲಿಸಿಕೊಂಡು ಬಂದ ನಾಲ್ವರು ಖದೀಮರು ವೃದ್ಧೆಯನ್ನು ಅಡ್ಡಗಟ್ಟಿದ್ದಾರೆ.
ಬೈಕ್‌ನಿಂದ ಇಳಿದ ಇಬ್ಬರು ಆರೋಪಿಗಳು ತಾವು ಪೊಲೀಸ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದಾರೆ. ಮುಂದೆ ರಸ್ತೆಯಲ್ಲಿ ಕಳ್ಳರಿದ್ದಾರೆ, ನೀವು ಮೈಮೇಲೆ ಇಷ್ಟೊಂದು ಚಿನ್ನಾಭರಣಗಳನ್ನು ಏಕೆ ಧರಿಸಿಕೊಂಡು ಹೋಗುತ್ತಿದ್ದೀರಿ ಎಂದು ವೃದ್ಧೆಯನ್ನು ಪ್ರಶ್ನಿಸಿ ಹೆದರಿಸಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಒಡವೆಗಳನ್ನು ಬಿಚ್ಚಿ ಸೀರೆಯ ಸೆರಗಿನಲ್ಲಿ ಗಂಟು ಇಟ್ಟುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಇದನ್ನು ನಿಜವೆಂದು ನಂಬಿದ ವೃದ್ಧೆ ತಮ್ಮ ಮೈಮೇಲಿದ್ದ ಮಾಂಗಲ್ಯ ಸರ ಮತ್ತು ಎರಡು ಚಿನ್ನದ ಉಂಗುರಗಳನ್ನು ಬಿಚ್ಚಿದ್ದಾರೆ. ತಕ್ಷಣವೇ ಆ ಒಡವೆಗಳನ್ನು ತೆಗೆದುಕೊಂಡ ಕಳ್ಳರು, ಅದನ್ನು ಒಂದು ಕಾಗದದಲ್ಲಿ ಮಡಚಿ ಸೀರೆ ಸೆರಗಿನಲ್ಲಿ ಗಂಟು ಹಾಕಿಕೊಟ್ಟಿದ್ದಾರೆ. ಈ ವೇಳೆ ಉಳಿದ ಇಬ್ಬರು ಕಳ್ಳರು ಬೈಕ್ ಸ್ಟಾರ್ಟ್ ಮಾಡಿಕೊಂಡು ಸುತ್ತಮುತ್ತ ಯಾರು ಬರದಂತೆ ನಿಂತು ನಿಗಾ ವಹಿಸಿದ್ದರು.
ಮನೆಗೆ ಹೋಗಿ ನೋಡಿದಾಗ ಕಾದಿತ್ತು ಶಾಕ್
ಕಳ್ಳರು ಗಂಟು ಕಟ್ಟಿಕೊಟ್ಟು ಇಲ್ಲಿಂದ ತಕ್ಷಣವೇ ಮನೆಗೆ ಹೋಗಿ ಒಡವೆ ಧರಿಸಿಕೊಳ್ಳಿ ಎಂದು ಹೇಳಿ ಅಲ್ಲಿಂದ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ವೃದ್ಧೆ ಗಾಯಿತ್ರಿ ಅವರು ಮನೆಗೆ ತಲುಪಿದ ತಕ್ಷಣ ಸೀರೆ ಸೆರಗಿನ ಗಂಟನ್ನು ಬಿಚ್ಚಿ ನೋಡಿದ್ದಾರೆ. ಆದರೆ ಕಾಗದದ ಒಳಗಡೆ ಇದ್ದ ಚಿನ್ನಾಭರಣಗಳ ಬದಲು ಕಲ್ಲುಗಳು ಪತ್ತೆಯಾಗಿವೆ. ತಾವು ಮೋಸ ಹೋಗಿರುವುದು ತಿಳಿಯುತ್ತಿದ್ದಂತೆ ವೃದ್ಧೆ ಗಾಬರಿಯಿಂದ ಘಟನೆ ನಡೆದ ಸ್ಥಳಕ್ಕೆ ಓಡಿ ಬಂದಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಕೈಚಳಕ
ಬಳಿಕ ವೃದ್ಧೆ ಮತ್ತು ಅವರ ಕುಟುಂಬಸ್ಥರು ಘಟನಾ ಸ್ಥಳದ ಸಮೀಪದಲ್ಲಿದ್ದ ಅಂಗಡಿಯೊಂದರ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಾಲ್ವರು ಆರೋಪಿಗಳು ಅತ್ಯಂತ ಚಾಣಾಕ್ಷತನದಿಂದ ವೃದ್ಧೆಯ ಒಡವೆಗಳನ್ನು ಬದಲಾಯಿಸಿ ಕಲ್ಲು ಇಟ್ಟಿರುವ ದೃಶ್ಯ ಪತ್ತೆಯಾಗಿದೆ. ಕಳುವಾದ 42 ಗ್ರಾಂ ತೂಕದ ಚಿನ್ನಾಭರಣಗಳ ಒಟ್ಟು ಮೌಲ್ಯ ಸುಮಾರು 10 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಆಘಾತಕಾರಿ ಘಟನೆಗೆ ಸಂಬಂಧಿಸಿದಂತೆ ಸದ್ಯ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಚಿನ್ನಾಭರಣ ಕಳವಿಗೆ ಸ್ಕೆಚ್ – ಸಿಕ್ಕಬಿದ್ದ ನಾದಿನಿಯಿಂದ ಅತ್ತಿಗೆ ಹತ್ಯೆ!