Monday, June 15, 2026
Homeಟಾಪ್ ನ್ಯೂಸ್BIG NEWS: ಇಂಧನ ದರ ಏರಿಕೆ ಎಫೆಕ್ಟ್! ಓಲಾ, ಉಬರ್ ಕ್ಯಾಬ್ ದರ ಹೆಚ್ಚಳಕ್ಕೆ ಚಾಲಕರ...

BIG NEWS: ಇಂಧನ ದರ ಏರಿಕೆ ಎಫೆಕ್ಟ್! ಓಲಾ, ಉಬರ್ ಕ್ಯಾಬ್ ದರ ಹೆಚ್ಚಳಕ್ಕೆ ಚಾಲಕರ ಪಟ್ಟು

ಬೆಂಗಳೂರು: ಪೆಟ್ರೋಲ್, ಡೀಸೆಲ್ (Fuel) ಮತ್ತು ಸಿಎನ್‌ಜಿ ಬೆಲೆ ಏರಿಕೆಯ (Price Hike) ಬಿಸಿ ಈಗಾಗಲೇ ಜನಸಾಮಾನ್ಯರ ಜೇಬಿಗೆ ತಟ್ಟಿದ್ದು, ಇದರ ಬೆನ್ನಲ್ಲೇ ಸಿಲಿಕಾನ್ ಸಿಟಿ (Bengaluru) ಜನರಿಗೆ ಮತ್ತೊಂದು ದರ ಏರಿಕೆಯ ಆತಂಕ ಎದುರಾಗಿದೆ. ಖಾಸಗಿ ಬಸ್ ಪ್ರಯಾಣ ದರ ಹಾಗೂ ಖಾಸಗಿ ಶಾಲಾ ವಾಹನಗಳ ಶುಲ್ಕ ಹೆಚ್ಚಳದ ಬೆನ್ನಲ್ಲೇ, ಇದೀಗ ಬೆಂಗಳೂರಿನ ನಗರವಾಸಿಗಳ ಜೀವನಾಡಿಯಾಗಿರುವ ಓಲಾ (Ola) ಮತ್ತು ಉಬರ್ (Uber) ಕ್ಯಾಬ್‌ಗಳ ದರವನ್ನು (Fare Hike) ಹೆಚ್ಚಿಸಲು ಚಾಲಕರು (Drivers) ಮತ್ತು ಸಂಘಟನೆಗಳು ತೀವ್ರ ಒತ್ತಡ ಹೇರಲು ಮುಂದಾಗಿವೆ.

ಪ್ರತಿ ಕಿ.ಮೀಗೆ 5 ರಿಂದ 10 ರೂ ಏರಿಕೆಗೆ ಬೇಡಿಕೆ
ಇಂಧನ ದರಗಳು ಗಗನಕ್ಕೇರುತ್ತಿರುವುದರಿಂದ ಪ್ರಸ್ತುತ ಆದಾಯದಲ್ಲಿ ಜೀವನ ನಡೆಸುವುದು ಕಷ್ಟವಾಗುತ್ತಿದೆ ಎಂದು ಕ್ಯಾಬ್ ಚಾಲಕರು ಅಸಮಾಧಾನ ಹೊರಹಾಕಿದ್ದಾರೆ. ಹೀಗಾಗಿ, ಪ್ರತಿ ಕಿಲೋಮೀಟರ್‌ಗೆ ಕನಿಷ್ಠ 5 ರಿಂದ 10 ರೂಪಾಯಿಗಳಷ್ಟು ದರವನ್ನು ಹೆಚ್ಚಿಸಬೇಕು ಎಂದು ಅಗ್ರಿಗೇಟರ್ ಕಂಪನಿಗಳು ಹಾಗೂ ಸಾರಿಗೆ ಇಲಾಖೆಯ ಮೇಲೆ ಒತ್ತಡ ಹೇರಲು ಚಾಲಕರ ಸಂಘಟನೆಗಳು ತೀರ್ಮಾನಿಸಿವೆ. ಒಂದು ವೇಳೆ ಸಾರಿಗೆ ಇಲಾಖೆ ಮತ್ತು ಕಂಪನಿಗಳು ಈ ಬೇಡಿಕೆಗೆ ಒಪ್ಪಿಗೆ ಸೂಚಿಸಿದರೆ, ಬೆಂಗಳೂರಿನ ಕ್ಯಾಬ್ ಪ್ರಯಾಣಿಕರ ಮಾಸಿಕ ಬಜೆಟ್ ಏರುಪೇರಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಪ್ರಸ್ತುತ ಆರ್‌ಟಿಒ (RTO) ನಿಗದಿಪಡಿಸಿರುವ ದರ ಪಟ್ಟಿ ಎಷ್ಟು?

  • ಬೆಂಗಳೂರಿನಲ್ಲಿ ಸಾರಿಗೆ ಇಲಾಖೆಯು ವಾಹನಗಳ ಮೌಲ್ಯದ ಆಧಾರದ ಮೇಲೆ ಈಗಾಗಲೇ ದರವನ್ನು ನಿಗದಿಪಡಿಸಿದೆ
  • 10 ಲಕ್ಷ ರೂ.ಗಿಂತ ಕಡಿಮೆ ಮೌಲ್ಯದ ವಾಹನಗಳು: ಕನಿಷ್ಠ ದರ 100 ರೂಪಾಯಿ (ಮೊದಲ 4 ಕಿ.ಮೀಟರ್‌ಗೆ), ನಂತರದ ಪ್ರತಿ ಕಿ.ಮೀಟರ್‌ಗೆ 24 ರೂಪಾಯಿ.
  • 10 ರಿಂದ 15 ಲಕ್ಷ ರೂ. ಮೌಲ್ಯದ ವಾಹನಗಳು: ಕನಿಷ್ಠ ದರ 115 ರೂಪಾಯಿ, ನಂತರದ ಪ್ರತಿ ಕಿ.ಮೀಟರ್‌ಗೆ 28 ರೂಪಾಯಿ.
  • 15 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ವಾಹನಗಳು: ಕನಿಷ್ಠ ದರ 130 ರೂಪಾಯಿ, ನಂತರದ ಪ್ರತಿ ಕಿ.ಮೀಟರ್‌ಗೆ 32 ರೂಪಾಯಿ.

ಚಾಲಕರ ಅಸಮಾಧಾನಕ್ಕೆ ಕಾರಣವೇನು?
ಆರ್‌ಟಿಒ ನಿಯಮಗಳ ಪ್ರಕಾರ ದರ ನಿಗದಿಯಾಗಿದ್ದರೂ, ಓಲಾ ಮತ್ತು ಉಬರ್‌ನಂತಹ ಅಗ್ರಿಗೇಟರ್ ಕಂಪನಿಗಳು ವಾಹನ ಮಾಲೀಕರಿಗೆ/ಚಾಲಕರಿಗೆ ಪ್ರತಿ ಕಿಲೋಮೀಟರ್‌ಗೆ ಕೇವಲ 10 ರಿಂದ 12 ರೂಪಾಯಿ ಹಾಗೂ ಪೀಕ್ ಅವರ್‌ಗಳಲ್ಲಿ (ಗರಿಷ್ಠ ದಟ್ಟಣೆಯ ಸಮಯ) ಗರಿಷ್ಠ 20 ರೂಪಾಯಿಗಳನ್ನು ಮಾತ್ರ ನೀಡುತ್ತಿವೆ. ಇಂಧನ ದರ ಸರಣಿಯಾಗಿ ಏರಿಕೆಯಾಗುತ್ತಿದ್ದರೂ ಕಂಪನಿಗಳು ನೀಡುವ ಕಮಿಷನ್‌ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂಬುದು ಚಾಲಕರ ಮುಖ್ಯ ಆರೋಪವಾಗಿದೆ. ಹೀಗಾಗಿಯೇ ಕಿಮೀ ದರ ಹೆಚ್ಚಳಕ್ಕೆ ಅವರು ಪಟ್ಟು ಹಿಡಿದಿದ್ದಾರೆ. ಖಾಸಗಿ ಸಾರಿಗೆ ವಲಯದಲ್ಲಿ ಒಂದಾದ ಮೇಲೊಂದರಂತೆ ದರಗಳು ಏರಿಕೆಯಾಗುತ್ತಿದ್ದು, ಸಿಲಿಕಾನ್ ಸಿಟಿಯ ಮಧ್ಯಮ ವರ್ಗದ ಜನರಿಗೆ ಈ ಬೇಸಿಗೆಯಲ್ಲಿ ಬೆಲೆ ಏರಿಕೆಯ ಬಿಸಿ ಮತ್ತಷ್ಟು ತಟ್ಟುವ ಲಕ್ಷಣಗಳು ಕಾಣಿಸುತ್ತಿವೆ.

ಹೆಚ್ಚಿನ ಸುದ್ದಿ

Change Language »
error: Content is protected !!