ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಚೆಕ್‌ಪೋಸ್ಟಿನಲ್ಲಿ ಬರೋಬ್ಬರಿ ಎರಡು ಕೋಟಿ ರೂ. ಗಳನ್ನು ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.
ಬುಧವಾರ ಮುಂಜಾನೆ 3.30 ರ ಹೊತ್ತಿಗೆ ಮುಂಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹2 ಕೋಟಿ ವಶಕ್ಕೆ ಪಡೆಯಲಾಗಿದೆ. ಚುನಾವಣಾ ಎಫ್‌ಎಸ್‌ಟಿ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಜಂಟಿಯಾಗಿ ಪರಿಶೀಲಿಸಿದಾಗ ಅಕ್ರಮ ಹಣ ಪತ್ತೆಯಾಗಿದೆ.
ಹಿರೇಬಾಗೇವಾಡಿಗೆ ಭೇಟಿ ನೀಡಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಪರಿಶೀಲನೆ ನಡೆಸಿದ್ದಾರೆ.
ಈ ಅಕ್ರಮ ಹಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಓರ್ವ ಆರೋಪಿ ವಶಕ್ಕೆ ಪಡೆಯಲಾಗಿದೆ.
ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಚುರಕಾಗಿದ್ದು, ರಾಜ್ಯಾದ್ಯಂತ ಅಲ್ಲಲ್ಲಿ ಅಕ್ರಮ ಹಣ, ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ.