Monday, June 15, 2026
Homeಟಾಪ್ ನ್ಯೂಸ್BIG NEWS: ಇತಿಹಾಸ ಸೃಷ್ಟಿಸಿದ ಪ್ರಜ್ಞಾನಂದ, ವಿಶ್ವ ನಂ.1 ಕಾರ್ಲ್‌ಸನ್‌ಗೆ ತವರಿನಲ್ಲೇ ‘ಡಬಲ್ ಶಾಕ್’ ನೀಡಿದ...

BIG NEWS: ಇತಿಹಾಸ ಸೃಷ್ಟಿಸಿದ ಪ್ರಜ್ಞಾನಂದ, ವಿಶ್ವ ನಂ.1 ಕಾರ್ಲ್‌ಸನ್‌ಗೆ ತವರಿನಲ್ಲೇ ‘ಡಬಲ್ ಶಾಕ್’ ನೀಡಿದ ಭಾರತದ ಹುಡುಗ!

ಭಾರತದ (India) 20 ವರ್ಷದಆರ್. ಪ್ರಜ್ಞಾನಂದ (Praggnanandhaa) ನಾರ್ವೆ ಚೆಸ್ (Norway Chess) 2026 ಟೂರ್ನಮೆಂಟ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ವಿಶ್ವದ ನಂಬರ್ ಒನ್ ಆಟಗಾರ, ಮ್ಯಾಗ್ನಸ್ ಕಾರ್ಲ್‌ಸನ್ (Magnus carlsen) ಅವರನ್ನು ಅವರದ್ದೇ ತಾಯ್ನಾಡಿನಲ್ಲಿ ಎರಡು ಬಾರಿ ಮಣಿಸುವ ಮೂಲಕ ಪ್ರಜ್ಞಾನಂದ ಇತಿಹಾಸದ ಪುಟ ಸೇರಿದ್ದಾರೆ.

ಒಂದೇ ಕ್ಲಾಸಿಕಲ್ ಟೂರ್ನಮೆಂಟ್‌ನಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ಅವರಿಗೆ ಎರಡು ಬಾರಿ ಸೋಲಿನ ರುಚಿ ಉಣಿಸಿದ ವಿಶ್ವದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪ್ರಜ್ಞಾನಂದ ಪಾತ್ರರಾಗಿದ್ದಾರೆ.

ಈ ಟೂರ್ನಿಯಲ್ಲಿ ಪ್ರಜ್ಞಾನಂದ ಅವರು ಕಾರ್ಲ್‌ಸನ್ ವಿರುದ್ಧ ಸಂಪೂರ್ಣ ಮೇಲುಗೈ ಸಾದಿಸಿದ್ದಾರೆ. ಮೇ 27, 2026 ರಂದು ಮೊದಲ ಮುಖಾಮುಖಿಯಲ್ಲಿ ಬಿಳಿ ದಾಳಗಳೊಂದಿಗೆ (White Pieces) ಆಡಿದ್ದ ಪ್ರಜ್ಞಾನಂದ, ಕಾರ್ಲ್‌ಸನ್‌ಗೆ ಮೊದಲ ಆಘಾತ ನೀಡಿದ್ದರು. ಜೂನ್ 2, 2026 ರಂದು ಎರಡನೇ ಮುಖಾಮುಖಿಯಲ್ಲಿ ಕಪ್ಪು ದಾಳಗಳೊಂದಿಗೆ (Black Pieces) ಅದ್ಭುತ ಆಟ ಪ್ರದರ್ಶಿಸಿ, ಕಾರ್ಲ್‌ಸನ್ ಅವರನ್ನು ಎರಡನೇ ಬಾರಿಗೆ ಮಣಿಸಿದರು.

ಇದಕ್ಕೂ ಮುನ್ನ 2007ರ ಲಿನಾರೆಸ್ ಇಂಟರ್ನ್ಯಾಷನಲ್ ಚೆಸ್ ಟೂರ್ನಮೆಂಟ್‌ನಲ್ಲಿ ವಿಶ್ವನಾಥನ್ ಆನಂದ್ ಅವರು ಅಂದಿನ ಯುವ ಆಟಗಾರ ಕಾರ್ಲ್‌ಸನ್ ಅವರನ್ನು ಒಂದೇ ಟೂರ್ನಿಯಲ್ಲಿ ಎರಡು ಬಾರಿ ಸೋಲಿಸಿದ್ದರು. ಆ ಬಳಿಕ ಕಳೆದ 19 ವರ್ಷಗಳಿಂದ ಕಾರ್ಲ್‌ಸನ್ ಅವರನ್ನು ಒಂದೇ ಕ್ಲಾಸಿಕಲ್ ಟೂರ್ನಿಯಲ್ಲಿ ಎರಡು ಬಾರಿ ಸೋಲಿಸಲು ಜಗತ್ತಿನ ಯಾವುದೇ ಆಟಗಾರನಿಗೂ ಸಾಧ್ಯವಾಗಿರಲಿಲ್ಲ. ಇದೀಗ ಪ್ರಜ್ಞಾನಂದ ಆ ಅಸಾಧ್ಯ ಸಾಧನೆಯನ್ನು ಮಾಡಿ ತೋರಿಸಿದ್ದಾರೆ.

ಇನ್ನು, ಪ್ರಜ್ಞಾನಂದ ಅವರ ಈ ಜಯದೊಂದಿಗೆ ನಾರ್ವೆ ಚೆಸ್ 2026 ರ ಚಾಂಪಿಯನ್‌ಶಿಪ್ ರೇಸ್ ತೀವ್ರ ಕುತೂಹಲ ಕೆರಳಿಸಿದೆ. ಕಾರ್ಲ್‌ಸನ್ ಅವರಿಗೆ ತವರಿನಲ್ಲೇ ಭಾರಿ ಹಿನ್ನಡೆಯಾಗಿದ್ದರೆ, ಪ್ರಜ್ಞಾನಂದ ಅಂಕಗಳ ಪಟ್ಟಿಯಲ್ಲಿ ಮೇಲೇರಿದ್ದಾರೆ.

12 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿರುವ ಪ್ರಜ್ಞಾನಂದ ಅವರಿಗೆ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಇನ್ನುಳಿದ ಕೊನೆಯ 2 ಸುತ್ತುಗಳು (ರೌಂಡ್ 9 ಮತ್ತು 10) ಅತ್ಯಂತ ನಿರ್ಣಾಯಕವಾಗಿವೆ. ಅಮೆರಿಕದ ವೆಸ್ಲಿ ಸೋ (14 ಅಂಕ) ಮತ್ತು ಫ್ರಾನ್ಸ್‌ನ ಅಲಿರೆಜಾ ಫಿರೂಜ್ಜಾ (13 ಅಂಕ) ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ.

ಪ್ರಜ್ಞಾನಂದ ಕೊನೆಯ ಎರಡು ಸುತ್ತುಗಳಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ಮತ್ತು ಭಾರತದವರೇ ಆದ ಡಿ. ಗುಕೇಶ್ ವಿರುದ್ಧ ಸೆಣಸಾಡಲಿದ್ದಾರೆ. ಈ ಎರಡು ಪಂದ್ಯಗಳನ್ನು ಗೆದ್ದು ಪೂರ್ಣ 6 ಅಂಕಗಳನ್ನು (ಒಟ್ಟು 18 ಅಂಕಗಳು) ಗಳಿಸಿದರೂ ಸಹ, ಪ್ರಶಸ್ತಿ ಭಾರತದ ಪಾಲಾಗಬೇಕಾದರೆ ವೆಸ್ಲಿ ಸೋ ಮತ್ತು ಅಲಿರೆಜಾ ಫಿರೂಜ್ಜಾ ಅವರ ಪಂದ್ಯಗಳ ಫಲಿತಾಂಶಗಳ ಮೇಲೆ ಪ್ರಜ್ಞಾನಂದ ಅವಲಂಬಿತರಾಗಬೇಕಿದೆ.

ಇದನ್ನೂ ಓದಿ: ವಿಶ್ವ ನಂ.1 ಆಟಗಾರನಿಗೆ ಸೋಲಿನ ಶಾಕ್ ಕೊಟ್ಟ ಪ್ರಜ್ಞಾನಂದ!

ಹೆಚ್ಚಿನ ಸುದ್ದಿ

Change Language »
error: Content is protected !!