ಸೆಲೆಬ್ರಿಟಿಗಳಿಗೆ ಜನರ ತೆರಿಗೆ ದುಡ್ಡಲ್ಲಿ ಏನಕ್ಕೆ ಪ್ರತಿಮೆ ನಿರ್ಮಿಸಿ ಕೊಡ್ಬೇಕು ಎಂದು ಪ್ರಶ್ನಿಸುವ ಮೂಲಕ ಮತ್ತೆ ಸುದ್ದಿಯಲ್ಲಿರುವ ನಟ ಚೇತನ್ ವಿರುದ್ಧ ಈ ಬಾರಿ ಕರ್ನಾಟಕ ಫಿಲ್ಮ್ ಛೇಂಬರ್ ಗರಂ ಆಗಿದೆ.
‘ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಟ್ಟು ಉದ್ಘಾಟನೆ ಆಗಿದೆ. ಇದರ ವಿರುದ್ಧ ನಟ ಚೇತನ್ ಮಾತನಾಡಿದ್ದಾರೆ. ಅಂಬರೀಶ್ ಹೆಸರಿಡುವುದು ಇಡೀ ಇಂಡಸ್ಟ್ರಿಯ ಒತ್ತಾಯ ಆಗಿತ್ತು. ಎಲ್ಲರೂ ಅದನ್ನು ಸೇರಿ ನಡೆಸಿಕೊಟ್ಟರು. ಆಗಾಗ ಚೇತನ್ ನಮ್ಮ ಚಿತ್ರ ಕುಟುಂಬಕ್ಕೆ ಮುಜುಗರವಾಗುವಂತ ಹೇಳಿಕೆ ನೀಡುತ್ತಾ ಇರುತ್ತಾರೆ. ಅಂಬರೀಶ್ ಸ್ಮಾರಕ ನಿರ್ಮಾಣ ಒಂದು ಕುಟುಂಬದ ಒತ್ತಾಯ ಅಂತ ಚೇತನ್ ಆರೋಪ ಮಾಡ್ತಾರೆ. ಆದರೆ ಆ ಒತ್ತಾಯ ಇಂಡಸ್ಟ್ರಿಯದ್ದು ಆಗಿತ್ತು ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ. ಮಾ. ಹರೀಶ್ ಹೇಳಿದ್ದಾರೆ.
ಚಿತ್ರರಂಗದ ವಿಚಾರಕ್ಕೆ ಅಂಬರೀಶ್ ತುಂಬಾ ಸ್ಪಂದಿಸಿದ್ದಾರೆ. ನಮ್ಮ ಕುಟುಂಬದಲ್ಲಿಯೇ ಇರುವ ಚೇತನ್ ಅವರ ಬಗ್ಗೆ ಏನೇನೋ ಮಾತಾಡಿದ್ರೆ ನೋವಾಗುತ್ತೆ. ಅಣ್ಣಾವ್ರು, ಅಂಬರೀಶ್ ಅಥವಾ ಅಪ್ಪು ಸ್ಮಾರಕಗಳ ನಿರ್ಮಾಣ ಇಂಡಸ್ಟ್ರಿಯ ಬೇಡಿಕೆ, ಚೇತನ್ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಆತನೂ ನಮ್ಮ ಚಿತ್ರರಂಗದ ವ್ಯಕ್ತಿಯೇ. ಬುದ್ದಿ ಹೇಳ್ತೀವಿ, ಅದರ ಮೇಲೂ ಸರಿ ಹೋಗಿಲ್ಲಾಂದ್ರೆ ಆತನ ವಿರುದ್ಧ ಅಸಹಕಾರದ ತೀರ್ಮಾನ ತಗೋತೀವಿ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹೇಳಿದ್ದಾರೆ.