Thursday, July 10, 2025
Homeಬೆಂಗಳೂರುಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ: ಅನಿತಾ ಕುಮಾರಸ್ವಾಮಿ

ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ: ಅನಿತಾ ಕುಮಾರಸ್ವಾಮಿ

ಬೆಂಗಳೂರು: ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೆಂಬ ವದಂತಿ ಹಬ್ಬಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ, ಇದು ಶುದ್ಧಸುಳ್ಳು ಮತ್ತು ಅಪಪ್ರಚಾರದ ಭಾಗವಷ್ಟೇ. ಮತ್ತೊಮ್ಮೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ಈ ಹಿಂದೆಯೇ ಇದನ್ನು ಸ್ಪಷ್ಟಪಡಿಸಿದ್ದೇನೆ ಎಂದು ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ರಾಮನಗರ ಕ್ಷೇತ್ರವನ್ನು ನನ್ನ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಬಿಟ್ಟುಕೊಟ್ಟಿದ್ದೇನೆ. ಪುನಃ ಸ್ಪರ್ಧಿಸುವ ಮಾತೆಲ್ಲಿ? 2008ರಲ್ಲಿ ಆಪರೇಷನ್‌ ಕಮಲದ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ, ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ಆದೇಶ ಗೌರವಿಸಿ ಸ್ಪರ್ಧಿಸಿದ್ದೆ. ನಂತರದ ಚುನಾವಣೆಯಲ್ಲಿ ವೀರಭದ್ರಯ್ಯ ಅವರಿಗೆ ಮಧುಗಿರಿ ಕ್ಷೇತ್ರವನ್ನು ಸಂತೋಷದಿಂದ ಬಿಟ್ಟುಕೊಟ್ಟು ಪಕ್ಷದ ಕೆಲಸ, ಮನೆಗಷ್ಟೇ ಸೀಮಿತವಾದೆ. 2013ರಲ್ಲಿ ಕೂಡ ಕಾರ್ಯಕರ್ತರ ಒತ್ತಡಕ್ಕೆ ತಲೆಕೊಟ್ಟು ಚನ್ನಪಟ್ಟಣದಲ್ಲಿ ಸ್ಪರ್ಧಿಸಬೇಕಾಯಿತು. ಆಗಲೂ ನಾನು ಪಕ್ಷ ಹಾಗೂ ವರಿಷ್ಠರ ಆದೇಶವನ್ನಷ್ಟೇ ಪಾಲಿಸಿದೆ.

ಹೀಗೆ ಪಕ್ಷ ಹಾಗೂ ವರಿಷ್ಠರ ಆದೇಶವನ್ನು ಶಿರಸಾ ಪಾಲಿಸಿದ್ದೇನೆ. ಅಂಥ ಕ್ಲಿಷ್ಟ ಪರಿಸ್ಥಿತಿಯಲ್ಲೂ ಮನೆಮಗಳೆಂದು ಭಾವಿಸಿ ನನ್ನನ್ನು ಗೆಲ್ಲಿಸಿದ ಮಧುಗಿರಿ, ರಾಮನಗರ ಕ್ಷೇತ್ರಗಳ ಮಹಾಜನತೆಗೆ ಆಜೀವ ಪರ್ಯಂತ ನಾನು ಆಭಾರಿ. ಚನ್ನಪಟ್ಟಣ ಕ್ಷೇತ್ರದ ಜನತೆಗೂ ಚಿರಋಣಿ. ಸಿಕ್ಕಿದ ಅವಕಾಶ ಬಳಸಿಕೊಂಡು ಈ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಚುನಾವಣೆಯ ಕಣದಿಂದ ಹಿಂದೆ ಸರಿದು ಪಕ್ಷದ ಶ್ರಯೋಭಿವೃದ್ಧಿ ಹಾಗೂ ನನ್ನ ಕ್ಷೇತ್ರದ ಜನರ ಒಳಿತಿಗಾಗಿಯಷ್ಟೇ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಯಾರೂ ಇಂಥ ವದಂತಿಗಳನ್ನು ಹಬ್ಬಿಸಬಾರದು ಮತ್ತೂ ನಂಬಬಾರದು ಎನ್ನುವುದು ನನ್ನ ಕಳಕಳಿಯ ವಿನಂತಿ.

ಎಲ್ಲಾ ಚುಣಾವಣೆಗಳಲ್ಲಿ ಪಕ್ಷದ ಆದೇಶವನ್ನಷ್ಟೇ ಪಾಲಿಸಿ ನಡೆದಿದ್ದೇನೆಯೇ ಹೊರತು, ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರು ಕಟ್ಟಿದ ಈ ಪಕ್ಷಕ್ಕೆ ಧಕ್ಕೆ ತರುವ ಅಥವಾ ಕುಟುಂಬದ ಗೌರವಕ್ಕೆ ಚ್ಯುತಿಯುಂಟು ಮಾಡುವ ಕೆಲಸ ಮಾಡಿಲ್ಲ, ಮುಂದೆ ಮಾಡುವುದೂ ಇಲ್ಲ. ದಯಮಾಡಿ ನನ್ನ ಭಾವನೆಗಳನ್ನು ಗೌರವಿಸಬೇಕು ಎಂದು ಮನವಿ ಮಾಡಿದ್ದಾರೆ.

ಹೆಚ್ಚಿನ ಸುದ್ದಿ

While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!