Saturday, January 25, 2025
Homeಟಾಪ್ ನ್ಯೂಸ್ಮುಸ್ಲಿಮರಿಗೆ ಅನ್ಯಾಯ ಆಗಿಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಮುಸ್ಲಿಮರಿಗೆ ಅನ್ಯಾಯ ಆಗಿಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು: ಮೀಸಲಾತಿ ವಿಚಾರದಲ್ಲಿ ಬಿಜೆಪಿ ಜೇನುಗೂಡಿಗೆ ಕೈಹಾಕಿದೆ. ಗೊಂದಲ ಸೃಷ್ಟಿಯಾಗಿದೆ ಎಂಬ ಚರ್ಚೆಗಳಾಗುತ್ತಿವೆ. ಆದರೆ, ನಮ್ಮ ಸರಕಾರ ಜೇನುಗೂಡಿಗೆ ಕೈಹಾಕಿ ಜೇನನ್ನು ತೆಗೆದು ಸಮಾಜದ ಕಟ್ಟಕಡೆಯ ವ್ಯಕ್ತಿಗೆ, ಮುಖ್ಯವಾಹಿನಿಗೆ ಬರಲಾಗದೆ ಚಡಪಡಿಸುತ್ತಿದ್ದವರಿಗೆ ಹಾಗೂ ಧ್ವನಿ ಇಲ್ಲದವರಿಗೆ ಹಂಚಿದೆ ಎಂದು ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸಮರ್ಥಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಆ ವಿಚಾರದಲ್ಲಿ ತೃಪ್ತಿ ಇದೆ. ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ವೈಜ್ಞಾನಿಕವಾಗಿ ಮೀಸಲಾತಿ ಪರಿಷ್ಕರಣೆ ಕಾರ್ಯ ನಡೆದಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಕ್ಕಲಿಗರು, ಲಿಂಗಾಯತರು ಸೇರಿ ಎಲ್ಲ ಅರ್ಹರಿಗೆ ಸಾಮಾಜಿಕ ನ್ಯಾಯ ಕೊಡುವ ಕಾರ್ಯವನ್ನು ನಮ್ಮ ಸರಕಾರ ಮಾಡಿದೆ ಎಂದು ತಿಳಿಸಿದರು.

ಕೆಲವು ಸಾರಿ ವಿರೋಧ ಪಕ್ಷಗಳು, ಕಾಂಗ್ರೆಸ್‍ನ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಜನತಾದಳದವರು ಮುಸ್ಲಿಮರಿಗೆ ಮೀಸಲಾತಿ ರದ್ದುಪಡಿಸಿದ್ದಾಗಿ ಆಕ್ಷೇಪಿಸಿವೆ. ಶೇ 4ರ ಮೀಸಲಾತಿ ತೆಗೆದು ಶೇ.10 ಮೀಸಲಾತಿ ಇರುವ ಇಡಬ್ಲ್ಯುಎಸ್ ಅಡಿ ಅವರನ್ನು ತರಲಾಗಿದೆ. ಮುಸ್ಲಿಮರಿಗೆ ಅನ್ಯಾಯ ಆಗಿಲ್ಲ. ಸ್ವತಂತ್ರ ಭಾರತದ ಇತಿಹಾಸದಲ್ಲಿ ರಾಜ್ಯದಲ್ಲಿ ಶೇ.15 ಮೀಸಲಾತಿಯನ್ನು ಶೇ. 17ಕ್ಕೆ ಏರಿಸಲಾಗಿದೆ. 3ರ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು 7ಕ್ಕೆ ಏರಿಸಿ, ಅದು ಅನುಷ್ಠಾನವೂ ಆಗಿದೆ ಎಂದು ವಿವರಿಸಿದರು. ಯಾರಿಗೂ ಅನ್ಯಾಯ ಆಗದಂತೆ ಮೀಸಲಾತಿ ಜಾರಿ ಮಾಡಿದ್ದೇವೆ. ಸದಾಶಿವ ಆಯೋಗದ ಉಲ್ಲೇಖಗಳನ್ನೂ ಗಮನಿಸಿದ್ದೇವೆ ಎಂದು ತಿಳಿಸಿದರು.

ಇಷ್ಟು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ, ಸಿದ್ದರಾಮಯ್ಯ ಸಿಎಂ ಆಗಿದ್ದರೂ ಇಷ್ಟು ವರ್ಷ ಸದಾಶಿವ ಆಯೋಗ ವರದಿ ಯಾಕೆ ಜಾರಿ ಮಾಡಿಲ್ಲ? ಅದನ್ನು ಯಾಕೆ ಬಿಡುಗಡೆ ಮಾಡಿಲ್ಲ? ವಾಸ್ತವಿಕ ಸತ್ಯ ಯಾಕೆ ಒಪ್ಪುತ್ತಿಲ್ಲ? ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀತಿಯಡಿ ನಾವು ಕಾರ್ಯ ನಿರ್ವಹಿಸಿದ್ದೇವೆ. ಇದನ್ನು ಕಾಂಗ್ರೆಸ್‍ನವರು ರದ್ದು ಮಾಡಿ ಸಮಾಜಕ್ಕೆ ಅನ್ಯಾಯ ಮಾಡಲು ಸಿದ್ಧವೇ? ಎಂದು ಅವರು ಸವಾಲು ಹಾಕಿದರು.

ಬಿಜೆಪಿ ರಾಷ್ಟ್ರೀಯ ವಕ್ತಾರರು ಮತ್ತು ರಾಜ್ಯಸಭಾ ಸದಸ್ಯ ಜಿ.ವಿ.ಎಲ್. ನರಸಿಂಹರಾವ್, ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಹೆಚ್ಚಿನ ಸುದ್ದಿ

error: Content is protected !!