ಭಾರತೀಯ ಹೆದ್ದಾರಿ ಪ್ರಾಧಿಕಾರವು ಏ. 1 ರಿಂದ ಜಾರಿಗೆ ಬರುವಂತೆ ರಾಷ್ಟ್ರಾದ್ಯಂತ ಟೋಲ್ ಶುಲ್ಕವನ್ನು ಶೇ 7ರಷ್ಟು ಹೆಚ್ಚಳ ಮಾಡಿದೆ. ಇತ್ತೀಚಿಗಷ್ಟೇ ಉದ್ಘಾಟನೆಗೊಂಡ ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ವೇ ಪ್ರಯಾಣಿಕರಿಗೆ ಈ ಶುಲ್ಕ ಹೆಚ್ಚಳ ಮತ್ತಷ್ಟು ಬಿಸಿ ತಾಗಿಸಲಿದೆ.
ವಾರ್ಷಿಕ ಶುಲ್ಕ ಪರಿಷ್ಕರಣೆಯ ನಿಯಮದಡಿ ಈ ಹೆಚ್ಚಳವನ್ನು ಜಾರಿಗೊಳಿಸಿರುವುದಾಗಿ ಎನ್‍ಎಚ್‍ಎಐ ತಿಳಿಸಿದ್ದು, ಪ್ರಸ್ತುತ ರಾಷ್ಟ್ರಾದ್ಯಂತ ಈ ಸರಾಸರಿ ದರ ಪ್ರತಿ ಕಿಮೀ ಗೆ 2.19 ರೂ. ನಷ್ಟಿದೆ. ಶೇ 15 ರ ವರೆಗೂ ಹೆಚ್ಚಳ ಮಾಡಲು ಹೆದ್ದಾರಿ ಪ್ರಾಧಿಕಾರಕ್ಕೆ ಅವಕಾಶವಿದ್ದು, ಸಂಚಾರ ದಟ್ಟಣೆ ತೀವ್ರವಾಗಿರುವ ಸ್ಥಳದಲ್ಲಿ ಸರಾಸರಿ ದರವನ್ನು ಪ್ರತಿ ಕಿಮೀ ಗೆ ಐದು ರೂ.ಗಳಷ್ಟು ಹೆಚ್ಚಿಸಲಾಗಿದೆ.
ಆರ್ಥಿಕ ವರ್ಷ 2022 ರಲ್ಲಿ ಹೆದ್ದಾರಿ ಪ್ರಾಧಿಕಾರ ನೀಡಿರುವ ಮಾಹಿತಿಯಂತೆ ದೇಶಾದ್ಯಂತ ಹೆದ್ದಾರಿಯ ಟೋಲ್‍ಗಳಿಂದ 33881 ಕೋಟಿ ರೂ. ಶುಲ್ಕ ಸಂಗ್ರಹಿಸಲಾಗಿದೆ. 2018 ರಿಂದ ಇದುವರೆಗೂ ಹೆದ್ದಾರಿ ಶುಲ್ಕದಲ್ಲಿ ಶೇ 32 ರಷ್ಟು ಹೆಚ್ಚಳವಾಗಿದೆ. ಹೆದ್ದಾರಿ ಶುಲ್ಕ ಹೆಚ್ಚಳದ ಪರಿಣಾಮ ದಿನಬಳಕೆಯ ವಸ್ತುಗಳ ಮೇಲೂ ಸಹ ಪರಿಣಾಮ ಬೀರಲ್ಲಿದ್ದು , ಈಗಾಗಲೇ ಗಗನಕ್ಕೇರಿರುವ ಸಾಮಾನ್ಯ ವಸ್ತುಗಳ ಇನ್ನಷ್ಟು ದುಬಾರಿಯಾಗಲಿವೆ