ಛತ್ತೀಸ್‍ಘಡ: ವಿವಾಹದ ಉಡುಗೊರೆಯಾಗಿ ನೀಡಿದ್ದ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಂ ಸ್ಫೋಟಗೊಂಡು ನವವಿವಾಹಿತ ವಧೂವರರು ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಕಬೀರ್ ಧಾಮ್ ಜಿಲ್ಲೆಯ ಕವರ್ಧಾ ಗ್ರಾಮದಲ್ಲಿ ಸೋಮವಾರ ನಡೆದಿದೆ. ಹೇಮೇಂದ್ರ ಮೆರಾವಿ, ಆತನ ಪತ್ನಿ ಮತ್ತು ಸಹೋದರ ಮೃತ ದುರ್ದೈವಿಗಳಾಗಿದ್ದಾರೆ. ಘಟನೆಯಲ್ಲಿ ಮತ್ತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೇಮೇಂದ್ರ ಮತ್ತು ಆತನ ಕುಟುಂಬದವರು ಮದುವೆಗೆ ಬಂದಿದ್ದ ಗಿಫ್ಟ್ ಗಳನ್ನು ತೆರೆಯುತ್ತಿದ್ದರು. ಇದೇ ರೀತಿ ಉಡುಗೊರೆಯಾಗಿ ಬಂದಿದ್ದ ಹೋಮ್ ಥಿಯೇಟರ್ ಸಿಸ್ಟಂನ್ನು ಪರೀಕ್ಷಿಸುವ ಸಲುವಾಗಿ, ವಿದ್ಯುತ್ ಸಂಪರ್ಕ ನೀಡುತ್ತಿದ್ದಂತೆಯೇ ಸೌಂಡ್‍ಸಿಸ್ಟಂ ಸ್ಪೋಟಿಸಿದೆ.
ಇದು ನಕ್ಸಲ್ ಪೀಡಿತ ಪ್ರದೇಶವಾಗಿದ್ದರೂ ಸ್ಥಳದಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಸಿಕ್ಕಿಲ್ಲ. ವಿಧಿವಿಜ್ಞಾನ ತಂಡ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದು ವರದಿ ಬಂದ ನಂತರ ಸ್ಫೋಟಕ್ಕೆ ಕಾರಣ ತಿಳಿಯಲಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮನೀಷ್ ಠಾಕೂರ್ ತಿಳಿಸಿದ್ದಾರೆ.