ನವದೆಹಲಿ : ಆದಾಯ ತೆರಿಗೆ ಇಲಾಖೆಯಿಂದ ವಿನಾಯಿತಿ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ (Congress) ಗೆ ಭಾರೀ ಶಾಕ್ ಎದುರಾಗಿದೆ. 2018-19ರ ವರ್ಷದಲ್ಲಿ ₹199.15 ಕೋಟಿ ಆದಾಯಕ್ಕೆ ಆದಾಯ ತೆರಿಗೆ (Income Tax) ವಿನಾಯಿತಿ ಕೋರಿ ಕಾಂಗ್ರೆಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ವಜಾಗೊಳಿಸಿದೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 13Aನಲ್ಲಿರುವ ಷರತ್ತುಗಳ ಉಲ್ಲಂಘನೆಯಾಗಿದೆ ಎಂಬ ಕಾರಣಕ್ಕೆ ವಿನಾಯಿತಿ ನೀಡಲು ನ್ಯಾಯಮಂಡಳಿ ತಿರಸ್ಕರಿಸಿದೆ. ಐಟಿ ರಿಟರ್ನ್ಸ್‌ಗಳನ್ನು ತಡವಾಗಿ ಸಲ್ಲಿಸಿದ್ದೇ ಕಾಂಗ್ರೆಸ್‌ಗೆ ಕಂಟಕವಾಗಿ ಪರಿಣಮಿಸಿದೆ.
ಇದನ್ನೂ ಓದಿ: ದ್ವೇಷ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಸುಪ್ರೀಂ ತೀರ್ಪು ಪಾಠವಾಗಬೇಕಿದೆ: ತೇಜಸ್ವಿ ಸೂರ್ಯ
ಕಾಂಗ್ರೆಸ್ ಪಕ್ಷವು ಫೆಬ್ರವರಿ 2, 2019 ರಂದು ತನ್ನ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿತ್ತು. ಸೆಕ್ಷನ್ 13A ನ ಅಡಿಯಲ್ಲಿ 199.15 ಕೋಟಿ ರೂಪಾಯಿ ವಿನಾಯಿತಿ ಪಡೆದ ನಂತರ ಆದಾಯವೇ ಇಲ್ಲ ಎಂದು ಘೋಷಿಸಿತ್ತು. ಆದರೂ, 2018-19 ರ ವರ್ಷಕ್ಕೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139 ರ ಅಡಿಯಲ್ಲಿ ನಿಗದಿಪಡಿಸಿದ ಡಿಸೆಂಬರ್ 31, 2018 ರ ವಿಸ್ತೃತ ಗಡುವಿನ ನಂತರ ಸಲ್ಲಿಸಲಾಗಿತ್ತು.
14.49 ಲಕ್ಷ ನಗದು ದೇಣಿಗೆ: ಸೆಪ್ಟೆಂಬರ್ 2019ರಲ್ಲಿ ಕಾಂಗ್ರೆಸ್ ಪಕ್ಷ ವಿವಿಧ ವ್ಯಕ್ತಿಗಳಿಂದ ₹14.49 ಲಕ್ಷ ನಗದು ದೇಣಿಗೆ ಪಡೆದಿದ್ದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಹಣಕಾಸು ಕಾಯ್ದೆ 2017 ರಿಂದ ಸೇರಿಸಲಾದ ಸೆಕ್ಷನ್ 13A(d), ರಾಜಕೀಯ ಪಕ್ಷಗಳು ₹2,000 ಕ್ಕಿಂತ ಹೆಚ್ಚಿನ ದೇಣಿಗೆಗಳನ್ನು ಪಡೆಯಬೇಕಿದ್ದರೆ ಬ್ಯಾಂಕ್ ಮೂಲಕವೇ ಪಡೆಯಬೇಕು.
ಅವಧಿ ಮೀರಿದ ಬಳಿಕ ಐಟಿ ರಿಟರ್ನ್ ಸಲ್ಲಿಸಿರುವುದು ಮತ್ತು ನಗದು ದೇಣಿಗೆ ಮಿತಿ ಉಲ್ಲಂಘನೆ ಮಾಡಿದ್ದಕ್ಕೆ ಸೆಕ್ಷನ್ 13A ಅಡಿಯಲ್ಲಿ ತೆರಿಗೆ ವಿನಾಯಿತಿಗಾಗಿ ಕಾಂಗ್ರೆಸ್ ಪಕ್ಷದ ಹಕ್ಕನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ತಿರಸ್ಕರಿಸಿದೆ. ಈ ಮೂಲಕ ತೆರಿಗೆ ಲಾಭ ಬಯಸುವ ರಾಜಕೀಯ ಪಕ್ಷಗಳಿಗೆ ಕಟ್ಟುನಿಟ್ಟಾದ ನಿಯಮ ಪಾಲಿಸುವಂತೆ ಮಾಡುವಂತೆ ಮಂಡಳಿ ಸೂಚಿಸಿದೆ.
ಏನಿದು ₹199 ಕೋಟಿ ದೇಣಿಗೆ ವಿವಾದ?: 2018-19 ರ ಆರ್ಥಿಕ ವರ್ಷದಲ್ಲಿ ₹199.15 ಕೋಟಿ ಆದಾಯವನ್ನು ತೆರಿಗೆ ಮುಕ್ತವೆಂದು ಕಾಂಗ್ರೆಸ್ ಘೋಷಿಸಿತ್ತು. ಆದರೆ ಐಟಿ ರಿಟರ್ನ್‌ನ ಕಾಂಗ್ರೆಸ್ ಗಡುವಿನ ನಂತರ ಐಟಿ ರಿಟರ್ನ್ಸ್ ಸಲ್ಲಿಸಿತ್ತು. ಆದ್ದರಿಂದ ಇಷ್ಟೆಲ್ಲಾ ಸಮಸ್ಯೆ ಆಗಿದೆ.