ಮನೆಗೆ ನುಗ್ಗಿ ಪೊಲೀಸರು ಮಾಡಿದ ದಾಳಿಯಲ್ಲಿ ನಾಲ್ಕು ದಿನಗಳ ಹಸುಳೆಯೊಂದು ಮೃತಪಟ್ಟ ದಾರುಣ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ. ಏಕಾಏಕಿ ಮನೆಗೆ ನುಗ್ಗಿದ ಪೊಲೀಸರು ಶೋಧಕಾರ್ಯ ಮುಗಿಸಿ ತೆರಳಿದ ಮೇಲೆ ಮಗು ಪೊಲೀಸರ ಬೂಟುಗಾಲಿಗೆ ಸಿಲುಕಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಮೃತ ಮಗುವಿನ ಅಜ್ಜ ಭೂಷಣ್ ಪಾಂಡೆ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಲು ನಾಲ್ಕೈದು ಪೊಲೀಸರು ಮನೆಗೆ ಹೋಗಿದ್ದರು ಎಂದು ಜಿಲ್ಲಾ ಎಸ್ಪಿ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಐವರನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ.
ಮುಂಜಾನೆ 3.20ಕ್ಕೆ ಪೊಲೀಸ್ ಸಿಬ್ಬಂದಿ ತಮ್ಮ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಬಾಗಿಲು ತೆರೆಯದಿದ್ದಾಗ ಬಲಪ್ರಯೋಗ ಮಾಡಿ ಬಾಗಿಲು ತೆರೆದಿದ್ದಾರೆ. ನಾನು ಮತ್ತು ಮನೆಯಲ್ಲಿದ್ದ ಹೆಂಗಸರು ತಕ್ಷಣವೇ ಮನೆಯಿಂದ ಹೊರಬಂದೆವು, ಮನೆಗೆ ನುಗ್ಗಿದ ಪೊಲೀಸರ ಬೂಟಿನಡಿಗೆ ಸಿಲುಕಿ ಮಲಗಿದ್ದ ಮಗು ಮೃತಪಟ್ಟಿದೆ ಎಂದು ಮಗುವಿನ ಕುಟುಂಬದ ವ್ಯಕ್ತಿಯೊಬ್ಬರು ಹೇಳಿದ್ದಾರೆ.
ಮಗುವಿನ ಮರಣೋತ್ತರ ವರದಿ ಬಂದಿದ್ದು, ಮಗುವಿನ ಎದೆ ಹಾಗೂ ಹೊಟ್ಟೆಯ ಭಾಗಕ್ಕೆ ತೀವ್ರ ಪೆಟ್ಟಾಗಿದೆ ಎಂದು ವರದಿ ಹೇಳಿದೆ.