ಮೋದಿ ಬಂದ್ರು.. ದಶಪಥ ಹೆದ್ದಾರಿ ಉದ್ಘಾಟನೆ ಮಾಡಿದ್ರು.. ಹೋದ್ರು.
ಮಳೆ ಬಂತು.. ಹರಿಯೋಕೆ ಜಾಗ ಇಲ್ಲದೇ ನೀರು ಅಲ್ಲೇ ನಿಂತುಕೊಳ್ತು.
ಇದು ಬೆಂಗಳೂರು ಮೈಸೂರು ಹೆದ್ದಾರಿಯ ಅವಸ್ಥೆ. ಇನ್ನೂ ಉದ್ಘಾಟನೆಗೊಂಡು ವಾರ ಕಳೆದಿಲ್ಲ.. ಅದಾಗಲೇ ಬೆಂಗಳೂರು ಮೈಸೂರು ದಶಪಥ ರಸ್ತೆಯಲ್ಲಿ ಸಮಸ್ಯೆಗಳ ದಶಾವತಾರ ದರ್ಶನವೇ ಆಗ್ತಿದೆ. ನೆನ್ನೆ ಸುರಿದ ಅಲ್ಪಪ್ರಮಾಣದ ಮಳೆಗೆ ದಶಪಥ ರಸ್ತೆ ಕೆರೆಯಾಗಿ ಮಾರ್ಪಾಡಾಗಿದೆ.
ಮಳೆ ನೀರು ಹರಿದುಹೋಗದೇ ರಸ್ತೆಯಲ್ಲೇ ನಿಂತಿರುವ ಕಾರಣ ವಾಹನ ಸವಾರರು ಪರದಾಡುವಂತಾಗಿದೆ. ಇತ್ತ ಸರ್ವೀಸ್ ರಸ್ತೆಯೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಹೆದ್ದಾರಿಯಲ್ಲೇ ಹೋಗಬೇಕಿದೆ. ಹೆದ್ದಾರಿ ನಿರ್ಮಾಣಕ್ಕಾಗಿ ಖರ್ಚು ಮಾಡಿದ ಸಾವಿರಾರು ಕೋಟಿ ರುಪಾಯಿ ನೀರು ಪಾಲಾಯ್ತಲ್ಲ ಎಂದು ಜನ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಾರೆ
ನೂರಾರು ರುಪಾಯಿ ಟೋಲ್ ಶುಲ್ಕ ತೆತ್ತ ಮೇಲೆ ಈ ಅವ್ಯವಸ್ಥೆಯ ರಸ್ತೆಯಲ್ಲೇ ಓಡಾಡಬೇಕಾದ ಪರಿಸ್ಥಿತಿಯಿಂದ ವಾಹನಸವಾರರು ಸಿಟ್ಟಿಗೆದ್ದಿದ್ದಾರೆ. ಅಂತಾರಾಷ್ಟ್ರೀಯ ಗುಣಮಟ್ಟದ ರಸ್ತೆ ಮಾಡ್ತೀವಿ ಎಂದ ಬಿಜೆಪಿ ನಾಯಕರು ಈಗ ಜನರಿಗೆ ಕೆರೆ ನಿರ್ಮಿಸಿಕೊಟ್ಟಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.