ನವದೆಹಲಿ: ಗಡಿಯಲ್ಲಿ ಚೀನಾದ ಅತಿಕ್ರಮಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಮೌನವನ್ನು ಪ್ರಶ್ನಿಸಿರುವ ಕಾಂಗ್ರೆಸ್ ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಭಾರತದ ಪ್ರಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಅವರು ಈಶಾನ್ಯ ಭಾರತದ ವಿಚಾರವನ್ನು ಅದರಷ್ಟಕ್ಕೆ ಬಿಟ್ಟು ‘ಕೈತೊಳೆದುಕೊಂಡಿದ್ದರು’ ಎಂದು ಹೇಳಿದ್ದಾರೆ.
1962ರಲ್ಲಿ ಈಶಾನ್ಯ ಭಾರತವನ್ನು ‘ಅದರ ವಿಧಿಯಂತೆ ಆಗಲಿ’ ಎಂದು ಹೇಳಿ ಕೈಚೆಲ್ಲಲಾಗಿತ್ತು. ಅರುಣಾಚಲ ಪ್ರದೇಶಕ್ಕೆ ಚೀನಿಯರು ಬರುವುದನ್ನು ನಾವು ತಡೆದಿದ್ದೇವೆ. ಆದರೆ ಕಾಂಗ್ರೆಸ್ ‘ಅಯ್ಯೋ, ಪ್ರಧಾನಿ ಮಾತನಾಡುವುದಿಲ್ಲ’ ಎಂದು ಹೇಳಬಹುದು. ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಏನು ಹೇಳಿದ್ದಾರೆಂದು ರಾಹುಲ್ ಗಾಂಧಿ ದಯವಿಟ್ಟು ಪರಿಶೀಲಿಸಬೇಕೆಂದು ನಾನು ಬಯಸುತ್ತೇನೆ’’ ಎಂದು ನಿರ್ಮಲಾ ಕುಟುಕಿದ್ದಾರೆ.
ಇಂದಿಗೂ ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಜನರು ಭಾರತದೊಂದಿಗೆ ಗಟ್ಟಿಯಾಗಿ ನಿಂತಿದ್ದಾರೆ. ಇದರಿಂದ ಚೀನೀಯರು ಹಿಂದೆ ಸರಿದರು ಎಂದವರು ಹೇಳಿದರು.
ಅರುಣಾಚಲ ಪ್ರದೇಶದ ಹಲವು ಸ್ಥಳಗಳಿಗೆ ಚೀನಾ ಮರುನಾಮಕರಣ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಧಾನಿಯ ಮೌನವನ್ನು ಪ್ರಶ್ನಿಸಿದೆ.