ಕಲಬುರಗಿ : ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಯು ಧರಿಸಿದ್ದ ಜನಿವಾರಕ್ಕೆ ಕತ್ತರಿ ಹಾಕುವ ಮೂಲಕ ನಂತರವೇ ನೀಟ್ ಪರೀಕ್ಷೆ ಬರೆಯಲು ಬಿಟ್ಟ ಇಂದಿನ ಘಟನೆಯಿಂದ ಜಿಲ್ಲೆ ಹಾಗೂ ರಾಜ್ಯಾದ್ಯಂತ ಮತ್ತೆ ಆಕ್ರೋಶ ಭುಗಿಲೆದ್ದಿದೆ. ಪರೀಕ್ಷೆಯ ಬಳಿಕ ವಿದ್ಯಾರ್ಥಿಗೆ ಶಾಸ್ತ್ರೋಕ್ತವಾಗಿ ಮತ್ತೆ ಜನಿವಾರ ಧಾರಣೆ ಮಾಡಲಾಗಿದೆ.
ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿ ಶ್ರೀಪಾದ್ ಪಾಟೀಲ್ ಜನಿವಾರವನ್ನು ಪರೀಕ್ಷಾ ಕೇಂದ್ರದ ಸಿಬ್ಬಂದಿ ತೆಗೆಸಿದ್ದಾರೆ. ನಗರದ ಸೇಂಟ್ ಮೇರಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆದ ಈ ಘಟನೆ ಭಾರೀ ವಿವಾದಕ್ಕೀಡಾಗಿದೆ.
ಪರೀಕ್ಷೆಯ ಬಳಿಕ ವಿದ್ಯಾರ್ಥಿಯನ್ನು ಪೋಷಕರು ಮತ್ತು ಕೆಲ ಹಿಂದೂ ಮುಖಂಡರು ಪರೀಕ್ಷಾ ಕೇಂದ್ರದಲ್ಲಿಯೇ ಕೂರಿಸಿ ಶಾಸ್ತ್ರೋಕ್ತವಾಗಿ ಮತ್ತೆ ಜನಿವಾರ ಧಾರಣೆ ಮಾಡಿಸಿದ್ದಾರೆ. ಇನ್ನು ಜನಿವಾರಕ್ಕೆ ಕತ್ತರಿ ಹಾಕಿದ್ದರಿಂದ ಮನನೊಂದು ವಿದ್ಯಾರ್ಥಿ ಎಕ್ಸಾಂನಲ್ಲಿ ರೋಲ್ ನಂಬರ್ ಸಹ ತಪ್ಪಾಗಿ ಬರೆದಿದ್ದಾಗಿಯೂ ಹೇಳಿಕೆ ನೀಡಿದ್ದಾನೆ.
ಘಟನೆ ಖಂಡಿಸಿ ಹಿಂದೂಪರ ಸಂಘಟನೆಗಳು ಸಹ ಬೆಂಬಲಿಸಿ ಟೈಯರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದು, ಜನಿವಾರಕ್ಕೆ ಕತ್ತರಿ ಹಾಕಿದ ಪ್ರಕರಣ ಸಂಬಂಧ ಈಗಾಗಲೇ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.