ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರನ್ನು ಸಂದರ್ಶನ ಮಾಡಿರುವ NDTV.com ಸಂದರ್ಶನದ ಭಾಗವನ್ನು ತಿರುಚಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ಡಿಕೆ ಶಿವಕುಮಾರ್ ಅವರಿಗೆ ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನ ನೀಡಲಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆಂದು NDTV ವರದಿ ಮಾಡಿತ್ತು.
“ನಾನು ಕೂಡ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ. ಡಿಕೆ ಶಿವಕುಮಾರ್ ಅವರೂ ಆಕಾಂಕ್ಷಿ. ಆದರೆ, ಅವರಿಗೆ ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆ ನೀಡಲಾರದು” ಎಂದು ಸಿದ್ದರಾಮಯ್ಯ ಹೇಳಿರುವುದಾಗಿ ವರದಿಯಲ್ಲಿ ಹೇಳಲಾಗಿತ್ತು. ಅಲ್ಲದೆ, ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಹೊಂದಾಣಿಕೆ ಇಲ್ಲ ಎಂಬರ್ಥದಲ್ಲಿ ಸುದ್ದಿಯನ್ನು ತಿರುಚಲಾಗಿತ್ತು.
ಏಪ್ರಿಲ್ 3ರಂದು ಸಂದರ್ಶನ ಮಾಡಿದ ತುಣುಕನ್ನು ಎನ್‌ಡಿಟಿವಿ ವೆಬ್‌ಸೈಟ್‌ನಲ್ಲಿ ಏಪ್ರಿಲ್ 3 ರ ರಾತ್ರಿ 9:34ಕ್ಕೆ “highcommand wont..”siddaramaih says DK Shivakumar won’t be chief minister” ಎಂಬ ತಲೆಬರಹ ನೀಡಿ ಸುದ್ದಿ ಪ್ರಕಟಿಸಿತ್ತು.. ಆದ್ರೆ ಈ ಸುದ್ದಿ ಪ್ರಕಟ ಗೊಂಡ ಕೆಲವೇ ಹೊತ್ತಲ್ಲಿ ಅಂದರೆ ರಾತ್ರಿ 12:30 ಕ್ಕೆ ಇಡೀ ಸುದ್ದಿಯನ್ನೇ ಬದಲಿಸಿ “Democratic process” :siddaramaih on congress’ chief minister pick” ಎಂದು ಬದಲಾವಣೆ ಮಾಡಿ ಸುದ್ದಿಯನ್ನು ತಿದ್ದಿದೆ.
ಈ ವರದಿ ಬಿತ್ತರವಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲವಾಗಿತ್ತು, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅಭಿಮಾನಿಗಳ ನಡುವೆ ವಾಗ್ವಾದ ನಡೆಯುವ ಸಾಧ್ಯತೆ ಬಗ್ಗೆ ಕೈ ಪಾಳೆಯದಲ್ಲಿ ಆತಂಕ ಶುರುವಾಗಿತ್ತು. ಆದರೆ, ಕೆಲವೇ ಗಂಟೆಗಳಲ್ಲಿ NDTV ಸುದ್ದಿಯನ್ನು ತಿರುಚಿ ಪೇಚಿಗೆ ಸಿಲುಕಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ನಾನೂ, ಡಿಕೆಶಿ ಆಕಾಂಕ್ಷಿಗಳು, ಪ್ರಜಾಪ್ರಭುತ್ವದಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂದು ಬಯಸುವುದು ತಪ್ಪೇನಿಲ್ಲ. ಆದರೆ, ಸಿಎಂ ಆಗಬೇಕೆಂದರೆ ಶಾಸಕರು ಆಯ್ಕೆ ಮಾಡುತ್ತಾರೆ, ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಸಿದ್ದರಾಮಯ್ಯ ಉತ್ತರಿಸಿದ್ದಾರೆ. ಇದನ್ನು ಸಂಪೂರ್ಣವಾಗಿ ತಿರುಚಿರುವ NDTV ಡಿಕೆಶಿಯನ್ನು ಹೈಕಮಾಂಡ್ ಸಿಎಂ ಮಾಡಲ್ಲ ಎಂದು ಸಿದ್ದರಾಮಯ್ಯ ಹೇಳಿರುವುದಾಗಿ ವರದಿ ಮಾಡಿದೆ.
ಎನ್‌ಡಿಟಿವಿ ವರದಿಯನ್ನೇ ಆಧರಿಸಿ ರಾಜ್ಯದ ಹಲವು ಪ್ರಮುಖ ಸುದ್ದಿ ಸಂಸ್ಥೆಗಳೂ ಕೂಡಾ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ವಿರುದ್ಧ ಮಾತನಾಡಿದ್ದಾರೆ ಎಂಬಂತೆ ಸುದ್ದಿ ಮಾಡಿದ್ದವು. ಆದರೆ ಇದೀಗ ಎನ್‌ಡಿಟಿವಿ, ತಿರುಚಿ ಬರೆದ ವರದಿಯನ್ನು ತಿದ್ದಿ ಬೇರೆ ರೂಪ ನೀಡಿ ಜಾರಿಕೊಳ್ಳುವ ಪ್ರಯತ್ನ ಮಾಡಿದೆಯಾದರೂ ತಿರುಚಿದ ಸುದ್ದಿಯ ಸ್ಕ್ರೀನ್‌ಶಾಟ್‌ಗಳನ್ನು ಬಳಸಿ ಎನ್‌ಡಿಟಿವಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗ್ತಿದೆ.