Thursday, July 16, 2026
Homeಟಾಪ್ ನ್ಯೂಸ್I.N.D.I.A : 2029ರ ಚುನಾವಣೆಗೆ ಈಗಿನಿಂದಲೇ ರಣತಂತ್ರ! ದೆಹಲಿಯಲ್ಲಿ ನಾಳೆ ಇಂಡಿಯಾ ಜನಬಂಧನ್ ಮಹಾಸಭೆ, ಯಾರೆಲ್ಲಾ...

I.N.D.I.A : 2029ರ ಚುನಾವಣೆಗೆ ಈಗಿನಿಂದಲೇ ರಣತಂತ್ರ! ದೆಹಲಿಯಲ್ಲಿ ನಾಳೆ ಇಂಡಿಯಾ ಜನಬಂಧನ್ ಮಹಾಸಭೆ, ಯಾರೆಲ್ಲಾ ಭಾಗಿ?

ನವದೆಹಲಿ: 2029ರ ಸಾರ್ವತ್ರಿಕ ಚುನಾವಣೆಯನ್ನು(Election) ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರ್ಕಾರದ(Central Government) ವಿರುದ್ಧ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲು ವಿರೋಧ ಪಕ್ಷಗಳ ಮೈತ್ರಿಕೂಟ ಸಜ್ಜಾಗಿದೆ. ನವದೆಹಲಿಯ(Delhi) ಕಾನ್‌ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಆಯೋಜಿಸಲಾಗಿರುವ ಇಂಡಿಯಾ ಜನಬಂಧನ್(India Janabandan) ಮಹತ್ವದ ಸಭೆಯಲ್ಲಿ ಒಟ್ಟು 23 ರಾಜಕೀಯ ಪಕ್ಷಗಳು ಭಾಗವಹಿಸಲಿವೆ ಎಂದು ಕಾಂಗ್ರೆಸ್(Congress) ಪ್ರಕಟಿಸಿದೆ. ವಿರೋಧ ಒಗ್ಗಟ್ಟಿನಿಂದ ಇವೆ ಎಂಬುದನ್ನು ಈ ಸಭೆ ಸಾಬೀತುಪಡಿಸಲಿದೆ ಎಂದು ಮೈತ್ರಿಕೂಟ ಪ್ರತಿಪಾದಿಸಿದೆ.

ಜನಬಂಧನ್ ಮಹಾಸಭೆಯಲ್ಲಿ 23 ಪಕ್ಷ ಭಾಗಿ
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಜೂನ್ 8 ರಂದು ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲು 23 ಪಕ್ಷಗಳು ಸಮ್ಮತಿ ಸೂಚಿಸಿವೆ ಎಂದು ತಿಳಿಸಿದ್ದಾರೆ. ಈ ಪೋಸ್ಟ್‌ ಅನ್ನು ಟ್ಯಾಗ್ ಮಾಡಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡೆರೆಕ್ ಒಬ್ರಯಾನ್, ಒಂದು ಸಾಮಾನ್ಯ ಮತ್ತು ಸ್ಪಷ್ಟ ಉದ್ದೇಶದೊಂದಿಗೆ ಈ ಸಭೆ ನಡೆಯುತ್ತಿದ್ದು, ಇಂಡಿಯಾ ಒಕ್ಕೂಟ ಸಂಪೂರ್ಣ ಒಗ್ಗಟ್ಟಾಗಿದೆ. ಸೌಹಾರ್ದತೆಯ ಉತ್ಸಾಹದಲ್ಲಿ ಪರಸ್ಪರ ಭೇಟಿಯಾಗಲು ಹಲವು ಪಕ್ಷಗಳು ಅತ್ಯಂತ ಉತ್ಸುಕತೆಯಿಂದ ಎದುರು ನೋಡುತ್ತಿವೆ ಎಂದು ಬರೆದುಕೊಂಡಿದ್ದಾರೆ.

ಇದೇ ವೇಳೆ, ಕೆಲವು ಪ್ರಮುಖ ಪಕ್ಷಗಳು ತಮ್ಮದೇ ಆದ ವೈಯಕ್ತಿಕ ಕಾರಣಗಳಿಂದಾಗಿ ಈ ಸಭೆಯಿಂದ ದೂರ ಉಳಿಯುತ್ತಿವೆ ಎಂದು ಜೈರಾಮ್ ರಮೇಶ್ ಸ್ಪಷ್ಟಪಡಿಸಿದ್ದಾರೆ. ಸಭೆಗೆ ಬಾರದ ಪಕ್ಷಗಳೂ ಸಹ, ಲಕ್ಷಾಂತರ ಭಾರತೀಯರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿರುವ, ಪ್ರತಿದಿನ ಸಂವಿಧಾನದ ಮೇಲೆ ದಾಳಿ ನಡೆಸುತ್ತಿರುವ ಹಾಗೂ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷದ ನಾಯಕರನ್ನು ಹತ್ತಿಕ್ಕುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊಂದಿವೆ ಎಂದು ಅವರು ಹೇಳಿದ್ದಾರೆ. ನಿರಂತರ ಬೆಲೆ ಏರಿಕೆಯ ಮೂಲಕ ಕೋಟ್ಯಂತರ ಭಾರತೀಯರ ಜೀವನೋಪಾಯಕ್ಕೆ ಹಾನಿ ಮಾಡುತ್ತಿರುವ ಕೇಂದ್ರದ ನೀತಿಗಳ ವಿರುದ್ಧ ಇಡೀ ಒಕ್ಕೂಟ ಒಂದೇ ಧ್ವನಿಯಲ್ಲಿ ಹೋರಾಡಲಿದ್ದು, ಇಂಡಿಯಾ ಜನಬಂಧನ್ ಒಗ್ಗಟ್ಟಾಗಿ ಮುಂದುವರಿಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಆದರೆ, ಈ ಮಹತ್ವದ ಸಭೆಯ ನಡುವೆಯೂ ಒಕ್ಕೂಟದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಬಹಿರಂಗವಾಗಿವೆ. ಪ್ರಮುಖ ಪಕ್ಷಗಳಾದ ಆಮ್ ಆದ್ಮಿ ಪಾರ್ಟಿ (AAP) ಈಗಾಗಲೇ ಇಂಡಿಯಾ ಒಕ್ಕೂಟದಿಂದ ಬಹಿರಂಗವಾಗಿಯೇ ದೂರ ಇರುವುದಾಗಿ ಘೋಷಿಸಿದ್ದರೆ, ಇತ್ತ ದಕ್ಷಿಣದ ಪ್ರಬಲ ಶಕ್ತಿ ಡಿಎಂಕೆ (DMK) ಈ ಸಭೆಯನ್ನು ಬಹಿಷ್ಕರಿಸುವುದಾಗಿ ತಿಳಿಸಿದೆ. ಇಂತಹ ಕೆಲವು ಆಂತರಿಕ ಹಿನ್ನಡೆಗಳ ನಡುವೆಯೂ, ಒಕ್ಕೂಟದ ಉಳಿದ ನಾಯಕರು ಒಟ್ಟಾಗಿ ಕುಳಿತು ಕೇಂದ್ರದ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಹಮ್ಮಿಕೊಳ್ಳಬೇಕಾದ ಮುಂದಿನ ಚಳವಳಿಗಳು ಮತ್ತು ರಾಜಕೀಯ ತಂತ್ರಗಾರಿಕೆಯ ಕುರಿತು ನಾಳೆಯ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಿದ್ದಾರೆ.

ಇದನ್ನೂ ಓದಿ: ನಂಗೂ ಬೇಕು , ನಂಗೂ ಬೇಕು ಸಚಿವ ಸ್ಥಾನ – ಶುರುವಾಯ್ತು ಕಾಂಗ್ರೆಸ್ ನಲ್ಲಿ ಸಖತ್ ಲಾಬಿ!

ಹೆಚ್ಚಿನ ಸುದ್ದಿ

Change Language »
error: Content is protected !!