ಲಕ್ನೋ: ಪಾಕಿಸ್ತಾನದ (Pakistan) ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಪರ ಬೇಹುಗಾರಿಕೆ (Spy) ನಡೆಸುತ್ತಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ATS) 24 ವರ್ಷದ ನೌಕಾಪಡೆಯ ಸಿಬ್ಬಂದಿಯನ್ನು ಬಂಧಿಸಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಎಟಿಎಸ್ ಈ ಬಗ್ಗೆ ಹೇಳಿಕೆ ನೀಡಿ, ಒಬ್ಬ ವ್ಯಕ್ತಿ ಪಾಕಿಸ್ತಾನ ಮೂಲದ ಐಎಸ್ಐ ಏಜೆಂಟ್ ಜೊತೆ ಸಂಪರ್ಕದಲ್ಲಿದ್ದು ಭಾರತಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾನೆ ಎಂಬ ಗುಪ್ತಚರ ಮಾಹಿತಿ ಬಂದಿದೆ. ಎಲೆಕ್ಟ್ರಾನಿಕ್ ಮತ್ತು ಭೌತಿಕ ಕಣ್ಗಾವಲು ಆಧರಿಸಿದ ತನಿಖೆಯ ಸಮಯದಲ್ಲಿ, ಶಂಕಿತನನ್ನು ಆಗ್ರಾ ನಿವಾಸಿ ಆದರ್ಶ್ ಕುಮಾರ್ ಅಲಿಯಾಸ್ ಲಕ್ಕಿ ಎಂದು ಗುರುತಿಸಲಾಗಿದೆ. ಆತನನ್ನು ಕೇರಳದ ಕೊಚ್ಚಿಯಲ್ಲಿ ಭಾರತೀಯ ನೌಕಾಪಡೆಯ ದಕ್ಷಿಣ ನೌಕಾ ಕಮಾಂಡ್‌ನಲ್ಲಿ ಲ್ಯಾನ್ಸ್ ನಾಯಕ್ ಆಗಿ ನೇಮಿಸಲಾಗಿತ್ತು ಎಂದು ಹೇಳಿದೆ.
ಎಟಿಎಸ್ ಪ್ರಕಾರ, ಆರೋಪಿಯು ಪಾಕಿಸ್ತಾನ ಮೂಲದ ಐಎಸ್ಐ ಏಜೆಂಟ್ ಜೊತೆ ಸಂಪರ್ಕ ಸಾಧಿಸಿದ್ದ ಮತ್ತು ಅವನ ಬ್ಯಾಂಕ್ ಖಾತೆಯಿಂದ ಹಣವನ್ನು ಹ್ಯಾಂಡ್ಲರ್‌ಗೆ ವರ್ಗಾಯಿಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಯುದ್ಧನೌಕೆಗಳು ಸೇರಿದಂತೆ ಕಾರ್ಯತಂತ್ರದ ಸೂಕ್ಷ್ಮ ನೌಕಾ ಸ್ವತ್ತುಗಳ ಛಾಯಾಚಿತ್ರಗಳನ್ನು ಆತ ಹಂಚಿಕೊಂಡಿದ್ದಾನೆ ಎಂದು ಸಂಸ್ಥೆ ಆರೋಪಿಸಿದೆ.
ತನಿಖೆಯ ಸಮಯದಲ್ಲಿ, ಎಲ್ಲಾ ಸಂಗತಿಗಳನ್ನು ಪರಿಶೀಲಿಸಿ ದೃಢಪಡಿಸಿದ ನಂತರ, ದೇಶ ವಿರೋಧಿ ಚಟುವಟಿಕೆಗಳು ಮತ್ತು ಪಾಕಿಸ್ತಾನ ಮೂಲದ ಗುಪ್ತಚರ ಜಾಲದೊಂದಿಗೆ ಭಾಗಿಯಾಗಿರುವ ಆರೋಪದ ಮೇಲೆ ಆದರ್ಶ್ ಕುಮಾರ್ ನನ್ನು ಸೋಮವಾರ ಎಟಿಎಸ್ ಬಂಧಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಪ್ರಸ್ತುತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೆಲವು ದಿನಗಳ ಹಿಂದೆ ಭಾರತೀಯ ಸೇನೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನದ ಐಎಸ್‌ಐ ಏಜೆಂಟ್‌ಗಳೊಂದಿಗೆ ಹಂಚಿಕೊಂಡ ಆರೋಪದ ಮೇಲೆ ರಾಜಸ್ಥಾನದ ಗುಪ್ತಚರ ಅಧಿಕಾರಿಗಳು ಜೈಸಲ್ಮೇರ್ ಪ್ರದೇಶದ ವ್ಯಕ್ತಿಯನ್ನು ಬಂಧಿಸಿದ್ದರು.
ಇದನ್ನೂ ಓದಿ: ಭಾರತ ಧ್ವಂಸಗೊಳಿಸಿದ್ದ ವಾಯುನೆಲೆ ಮರು ನಿರ್ಮಾಣ ಅಸಾಧ್ಯ – ನೆಲಸಮಗೊಳಿಸಿದ ಪಾಕ್!