ಬಹುನಿರೀಕ್ಷೆ ಹುಟ್ಟುಹಾಕಿದ್ದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಭಾರತೀಯ ಸಿನಿಮಾ ರಂಗದ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್’ ಸಿನಿಮಾದ ನಾಟು ನಾಟು ಹಾಡಿಗೆ ಓರಿಜನಲ್ ಸಾಂಗ್ ವಿಭಾಗದಲ್ಲಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಂದಿದೆ.
ಜ್ಯೂನಿಯರ್ ಎನ್‌ಟಿಆರ್, ರಾಮಚರಣ್ ತೇಜಾ ಅಭಿನಯದ ಆರ್‌ಆರ್‌ಆರ್ ಸಿನಿಮಾದ ಈ ಹಾಡು ತನ್ನದೇ ಆದ ವಿಭಿನ್ನ ಶೈಲಿಯ ಡ್ಯಾನ್ಸ್‌ನಿಂದ ಎಲ್ಲರ ಮೆಚ್ಚುಗೆ ಪಡೆದಿತ್ತು. ಅದಲ್ಲದೇ ಈ ಡ್ಯಾನ್ಸ್ ಸ್ಟೆಪ್ಸ್ ಸಖತ್ ವೈರಲ್ ಕೂಡಾ ಆಗಿತ್ತು. ಚಂದ್ರ ಬೋಸ್ ಬರೆದ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ರು.
ಈ ಬಾರಿ ಭಾರತದ ಮೂರು ಸಿನಿಮಾಗಳು ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿ ಹಲವು ವಿಭಾಗಗಳ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದವು. ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡು ಬೆಸ್ಟ್ ಓರಿಜನಲ್ ಸಾಂಗ್ ವಿಭಾಗದಲ್ಲಿ ಸ್ಪರ್ಧಿಸಿದ್ದರೆ, ಬೆಸ್ಟ್ ಡಾಕ್ಯುಮೆಂಟರಿ ವಿಭಾಗದಲ್ಲಿ ‘ಆಲ್ ದೆಟ್ ಬ್ರೀತ್ಸ್’ ಮತ್ತು ಬೆಸ್ಟ್ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸ್ಪರ್ಧೆ ಮಾಡಿತ್ತು.
ಅತ್ತ ನಾಟು ನಾಟು ಹಾಡಿಗೆ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆಯೇ ಸಭಾಂಗಣದ ತುಂಬಾ ಚೆಪ್ಪಾಳೆಯ ಸುರಿಮಳೆ ಸುರಿದರೆ ಇತ್ತ ಭಾರತದಲ್ಲೂ ರಾಮ್ ಚರಣ್ ಮತ್ತು ಜ್ಯೂನಿಯರ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ರು.
ಸೋಷಿಯಲ್ ಮೀಡಿಯಾ ತುಂಬೆಲ್ಲಾ ಅಭಿಮಾನಿಗಳು ಪ್ರಶಸ್ತಿ ವಿಜೇತರಿಗೆ ಶುಭಹಾರೈಕೆಯ ಮಹಾಪೂರವನ್ನೇ ಹರಿಸಿದ್ದಾರೆ. ಪ್ರಧಾನಿ ಮೋದಿ ಭಾರತೀಯರ ಸಾಧನೆಗೆ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.