ಚಾಮರಾಜನಗರ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸ ಅಧಿಕಗೊಳ್ಳುತ್ತಿದೆ. ಇದೀಗ ಮತ್ತೆ ಪ್ರಧಾನಿ ಅವರು ಏಪ್ರಿಲ್ 9ರಂದು ಬಂಡೀಪುರಕ್ಕೆ ಭೇಟಿ ನೀಡಲಿದ್ದು, ಎಡಿಜಿಪಿ ಅಲೋಕ್ ಕುಮಾರ್ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಮೊದಿ ಪ್ರವಾಸಕ್ಕೆ ಇನ್ನು ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿದ್ದು, ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಸಕಲ ತಯಾರಿ ನಡೆಸುತ್ತಿದೆ. ಯಾವುದೇ ಅಹಿತಕರ ಹಾಗೂ ಭದ್ರತಾ ಲೋಪ ಉಂಟಾಗದ ರೀತಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳುವ ಉದ್ದೇಶದಿಂದ ಎಡಿಜಿಪಿ ಅಲೋಕ್ ಕುಮಾರ್ ಅವರು ಬಂಡೀಪುರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಬಂಡೀಪುರ ಸಫಾರಿ ಕೇಂದ್ರದ ಸಮೀಪವೇ 3 ಹೆಲಿಪ್ಯಾಡ್ ನಿರ್ಮಾಣ ಆಗುತ್ತಿದ್ದು, ಸಾರ್ವಜನಿಕರು, ಅಭಿಮಾನಿಗಳನ್ನು ನಿಯಂತ್ರಿಸಲು ಸೂಕ್ತ ಬ್ಯಾರಿಕೇಡ್, ಕಾಂಪೌಂಡ್ ವ್ಯವಸ್ಥೆ ಇರಬೇಕು. ವನ್ಯಜೀವಿಗಳು ರಸ್ತೆ ದಾಟುವಾಗ ನಿಗಾವಹಿಸಬೇಕು. ಜೊತೆಗೆ ಐಜಿಪಿ ಮಧುಕರ್ ಪವಾರ್ ಹಾಗೂ ಚಾಮರಾಜನಗರ ಎಸ್‌ಪಿ ಪದ್ಮಿನಿ ಸಾಹೋ ಅವರಿಗೆ ಇತರೆ ಸೂಚನೆಗಳನ್ನು ಕೊಟ್ಟಿದ್ದಾರೆ.
ಮೋದಿ ಅವರು ವಿಶೇಷ ಹೆಲಿಕಾಪ್ಟರ್ ಮೂಲಕ ಬರಲಿದ್ದು, ಅಲ್ಲಿನ ಸಫಾರಿ, ರಾಂಪುರ ಆನೆ ಶಿಬಿರಕ್ಕೆ ಭೇಟಿ ಕೊಡಲಿದ್ದಾರೆ. ಹಾಗೆಯೇ ಮಾವುತರ ಜೊತೆ ಸಂವಾದ ನಡೆಸಲಿದ್ದಾರೆ. ಬಳಿಕ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶಕ್ಕೆ ತೆರಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಧಾನಿ ಮೋದಿ ಅವರ ಅಧಿಕೃತ ಪ್ರವಾಸ ಪಟ್ಟಿ ಇನ್ನೂ ಕೂಡ ಬಿಡುಗಡೆ ಆಗಿಲ್ಲ. ಆದರೆ, ಪ್ರಧಾನಿ ಬಂಡೀಪುರಕ್ಕೆ ಭೇಟಿ ಕೊಡುವ ಸಾಧ್ಯತೆ ಹೆಚ್ಚಾಗಿದೆ.