ಚುನಾವಣಾ ಪ್ರಚಾರಕ್ಕಾಗಿ ರಾಜ್ಯಪ್ರವಾಸಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ದಾವಣಗೆರೆಯಲ್ಲಿ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭ ಮಹಾ ಸಂಗಮ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ಮೋದಿ ಆಗಮನಕ್ಕಾಗಿ ಸೂಕ್ತ ಪೊಲೀಸ್ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ. ಪೊಲೀಸ್ ಮತ್ತು ಮೀಸಲು ಪೊಲೀಸ್ ಪಡೆಗಳನ್ನು ಬಂದೋಬಸ್ತ್ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ.
ಇಬ್ಬರು ಎಸ್‍ಪಿಗಳ ನಾಯಕತ್ವದಲ್ಲಿ ವೇದಿಕೆಯ ಬಳಿ 1200 ಮಂದಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಒಟ್ಟಾರೆ ಮೂರು ಎಸ್‍ಪಿಗಳೊಡನೆ 32 ಮಂದಿ ಡಿವೈಎಸ್‍ಪಿ ಹಾಗೂ ನಾಲ್ಕು ಸಾವಿರ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಗರುಡ ಪಡೆ ಮತ್ತು ಕೆಎಸ್‍ಆರ್‍ಪಿ ತುಕಡಿ ವ್ಯವಸ್ಥೆ ಮಾಡಲಾಗಿದೆ. ಮೋದಿ ಕಾರ್ಯಕ್ರಮಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ವಾಹನಗಳು ಆಗಮಿಸುವ ನಿರೀಕ್ಷೆಯಿದ್ದು ವಾಹನ ಸಂಚಾರ ದಟ್ಟಣೆ ತಪ್ಪಿಸಲು ಸೂಕ್ತ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜೊತೆಗೆ ಹೆದ್ದಾರಿಯಲ್ಲಿಯೂ ಸಹ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವುದು ಬಹುಮುಖ್ಯವಾಗಿದ್ದು, ಈ ಸಲುವಾಗಿಯೇ 600 ಸಿಬ್ಬಂದಿ ನಿಯೋಜಿತರಾಗಿದ್ದಾರೆ.
ಪಿಯುಸಿ ಪರೀಕ್ಷಾ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಓರ್ವ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ.
ಎಡಿಜಿಪಿ ಅಲೋಕ್ ಕುಮಾರ್ ಹಾಗೂ ದಾವಣಗೆರೆ ಎಸ್‍ಪಿ ನಿಶಾಂತ್ ಪ್ರಧಾನಿ ಮೋದಿ ಭದ್ರತೆಯ ಬಗ್ಗೆ ವಿವರಣೆ ನೀಡಿದ್ದಾರೆ.