ರಾಜ್ಯ ರಾಜಕಾರಣದಲ್ಲಿ ವಿಧಾನಸಭಾ ಚುನಾವಣೆ ಕಾವು ಹೆಚ್ಚಾಗಿದೆ. ಎಲ್ಲಾ ಪಕ್ಷಗಳೂ ಎಲೆಕ್ಷನ್‌ಗಾಗಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ರಾಷ್ಟ್ರೀಯ ನಾಯಕರನ್ನು ರಾಜ್ಯಕ್ಕೆ ಕರೆತಂದು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಪ್ರಮುಖ ವಿಪಕ್ಷ ನಾಯಕ ರಾಹುಲ್ ಗಾಂಧಿ ಇಬ್ಬರೂ ಒಂದೇ ದಿನ ಕರ್ನಾಟಕಕ್ಕೆ ಆಗಮಿಸುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಏಪ್ರಿಲ್ 9 ರಂದು ಕೋಲಾರದಲ್ಲಿ ರಾಹುಲ್ ನೇತೃತ್ವದಲ್ಲಿ ಕಾಂಗ್ರೆಸ್ ದೊಡ್ಡ ಸಮಾವೇಶ ಆಯೋಜಿಸಿದ್ದು, ಅದೇ ದಿನ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬರುತ್ತಿದ್ದಾರೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಮೂರು ದಿನಗಳ ಮೆಗಾ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ ಎನ್ನಲಾಗಿದೆ.
2019 ರ ಲೋಕಸಭಾ ಚುನಾವಣಾ ಪ್ರಚಾರ ವೇಳೆ ಕೋಲಾರದಲ್ಲಿ ನೀಡಿದ ಮೋದಿ ಸರ್‌ನೇಮ್ ಹೇಳಿಕೆ ಬಗ್ಗೆ ಎರಡು ವರ್ಷ ಶಿಕ್ಷೆಗೆ ಗುರಿಯಾಗಿ, ಸಂಸದ ಸ್ಥಾನ ಕಳೆದುಕೊಂಡಿರುವ ಬಳಿಕ ರಾಹುಲ್ ಗಾಂಧಿ ಮೊದಲ ಬಾರಿಗೆ ಕೋಲಾರಕ್ಕೆ ಬರುತ್ತಿರುವುದು ದೊಡ್ಟ ಹೈಪ್ ಅನ್ನು ಸೃಷ್ಟಿಸಿದೆ. ಇದೇ ಪ್ರಕರಣವನ್ನಿಟ್ಟುಕೊಂಡು ಬಿಜೆಪಿ ವಿರುದ್ಧ ಬ್ರಹ್ಮಾಂಡ ತಂತ್ರವನ್ನು ಕಾಂಗ್ರೆಸ್ ರೂಪಿಸಿದೆ ಎನ್ನಲಾಗಿದೆ.
ಏಪ್ರಿಲ್ 5 ಕ್ಕೆ ನಿಗದಿಯಾಗಿದ್ದ ರಾಹುಲ್ ಕಾರ್ಯಕ್ರಮವನ್ನು ಕಾಂಗ್ರೆಸ್ ಏಕಾಏಕಿ ಮುಂದೂಡಿ ಪ್ರಧಾನಿ ಬರುವ ದಿನದಂದೇ ನಿಗದಿ ಪಡಿಸಿರುವುದು ಕುತೂಹಲ ಹುಟ್ಟಿಸಿದೆ. ಅನರ್ಹದ ಬಳಿಕ ಮೊದಲ ಬಾರಿ ಕೋಲಾರಕ್ಕೆ ರಾಹುಲ್ ಬರುವುದರಿಂದ ಮಾಧ್ಯಮಗಳ ಗಮನವನ್ನು ರಾಹುಲ್ ಮೋದಿಗಿಂತ ಹೆಚ್ಚೇ ಸೆಳೆಯುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರದಲ್ಲಿ ಕಾರ್ಯಕ್ರಮದ ದಿನಾಂಕವನ್ನು ಒಂದೇ ದಿನ ಬರುವಂತೆ ಕಾಂಗ್ರೆಸ್ ನಿಗದಿ ಪಡಿಸಿದೆ ಎಂಬ ಮಾತುಗಳೂ ಕೇಳಿ ಬರುತ್ತಿದೆ.
ಒಟ್ಟಾರೆ, ಒಂದೇ ದಿನ ಇಬ್ಬರು ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಆಗಮಿಸುತ್ತಿರುವುದು ಚುನಾವಣಾ ಕಣವನ್ನು ಇನ್ನಷ್ಟು ರಂಗೇರಿಸಿದೆ.