ಬೆಂಗಳೂರು: ನಮ್ಮ ಬೆಂಗಳೂರು ಹಬ್ಬ-2023 ನ್ನು ಉತ್ಸವ ಸಮಿತಿ ಅಧ್ಯಕ್ಷರಾದ ಕಂದಾಯ ಸಚಿವ ಆರ್. ಅಶೋಕ್ ಅವರು ಇಂದು ಕಬ್ಬನ್ ಪಾರ್ಕ್ ನಲ್ಲಿ ಉದ್ಘಾಟನೆ ಮಾಡಿದರು. ಈ ಹಬ್ಬ, ಮಾರ್ಚ್ 25 ಮತ್ತು 26 ರಂದು ನಡೆಯಲಿದೆ. ಸಚಿವ ನಾಗೇಶ್, ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ. ಮಂಜುಳಾ ಹಾಗೂ ಇತರರು ಈ ವೇಳೆ ಉಪಸ್ಥಿತರಿದ್ದರು.
ಈ ಕಾರ್ಯಕ್ರಮ ಎರಡು ದಿನ ನಡೆಯಲಿದ್ದು, ಬೆಳಗ್ಗೆ ೧೦ ಗಂಟೆಗೆ ಆರಂಭವಾಗಿ ಸಂಜೆ ಆರು ಗಂಟೆವರೆಗೆ ಇರಲಿದೆ. ಇದರ ಜೊತೆಗೆ ಪುಸ್ತಕ ಮೇಳ, ಆಹಾರ ಮೇಳ, ಎಸ್‌ಎಚ್‌ಜಿ ಸ್ಟಾಲ್ಸ್, ಚಿತ್ರ ಸಂತೆ, ಮಕ್ಕಳ ಚಲನಚಿತ್ರೋತ್ಸವ, ಶಿಲ್ಪ ಕಲಾ ಸಂತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಲ್ಲದೇ ವಿಧಾನಸೌಧದ ಆವರಣದಲ್ಲಿ ಸಂಗೀತ ಕಾರ್ಯಕ್ರಮ ಸಹ ನಡೆಯಲಿದೆ.
ನಮ್ಮ ಬೆಂಗಳೂರು ಹಬ್ಬದ ಪ್ರಯುಕ್ತ ಬಾಲಭವನದಲ್ಲಿ ವಿವಿಧ ಅಕಾಡೆಮಿಗಳು, ರಂಗಶಂಕರ ಮತ್ತು ನೀನಾಸಂ ಸಂಸ್ಥೆಗಳ ಸಹಯೋಗದಲ್ಲಿ ನಾಟಕ, ಬೀದಿ ನಾಟಕಗಳು, ಗೊಂಬೆ ಪ್ರದರ್ಶನ ನಡೆಯಲಿದೆ. ಇದರೊಂದಿಗೆ ಯಕ್ಷಗಾನ, ಗಾಯನ, ನೃತ್ಯ ಕಾರ್ಯಕ್ರಮಗಳು ನಡೆಯಲಿವೆ. ಕಬ್ಬನ್ ಪಾರ್ಕ್‌ನ ಬ್ಯಾಂಡ್ ಸ್ಟಾಂಡ್ ವೇದಿಕೆಯಲ್ಲಿ ಪೋಲಿಸ್ ಬ್ಯಾಂಡ್ ವಾದನ, ನೃತ್ಯ ಜನಪದ ಗಾಯನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಈ ಹಬ್ಬದಲ್ಲಿ ವಿಧ ವಿಧವಾದ ಆಕರ್ಷಣೆಗಳು ಮೇಳೈಸಲಿದೆ. ಕಲಾಪ್ರಕಾರಗಳು, ಚಲನಚಿತ್ರಗಳು ಮತ್ತು ಆಹಾರ ಮೇಳದ ಮೂಲಕ ಬೆಂಗಳೂರು ನಗರದ ಭವ್ಯತೆ ಮತ್ತು ಸಂಸ್ಕೃತಿಯನ್ನು ಜನರಿಗೆ ಪ್ರಸ್ತುತಪಡಿಸುವ ಹಬ್ಬ ಇದಾಗಿದೆ.
ಈ ವರ್ಷ ಬೆಂಗಳೂರು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಮಯದ ಕೊರತೆಯಿರುವ ಕಾರಣ ಸರಳವಾಗಿ ಆಯೋಜಿಸಲಾಗಿದ್ದು ಮುಂದಿನ ವರ್ಷ ಮೈಸೂರು ದಸರಾ ರೀತಿಯಲ್ಲಿ ಹಬ್ಬ ಆಚರಣೆ ನಡೆಯಲಿದೆ ಎಂದು ಸಚಿವ ಅಶೋಕ್ ಹೇಳಿದ್ರು.
ಬೆಂಗಳೂರಿನಲ್ಲಿ ನೆಲೆಸಿರುವ ಪರಭಾಷಿಕರಿಗೆ ಮತ್ತು ನಾಡಿನ ಜನರಿಗೆ ಇಲ್ಲಿನ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಬೆಂಗಳೂರು ಹಬ್ಬದ ಅಂಗವಾಗಿ ಮಾ.25 ಮತ್ತು 26 ರಂದು ಇಲ್ಲಿನ ಆಯ್ದ ಸಿನಿಮಾ ಮಂದಿರಗಳಲ್ಲಿ ಮಾರ್ನಿಂಗ್ ಶೋ ವೇಳೆ ಹಳೆಯ ಕನ್ನಡ ಸಿನಿಮಾಗಳ ಉಚಿತ ವೀಕ್ಷಣೆಗೆ ಅವಕಾಶ ಮಾಡಲಾಗಿದೆ.