Thursday, July 16, 2026
Homeಟಾಪ್ ನ್ಯೂಸ್SIR: ಎಸ್‌ಐಆರ್ ಪ್ರಕ್ರಿಯೆ.. ದಸರಾದಲ್ಲಿ ಕಂಬಳ ಆಯೋಜನೆ ಪ್ರಸ್ತಾವನೆಗೆ ಸಂಸದ ಯದುವೀರ್ ಹೇಳಿದ್ದೇನು?

SIR: ಎಸ್‌ಐಆರ್ ಪ್ರಕ್ರಿಯೆ.. ದಸರಾದಲ್ಲಿ ಕಂಬಳ ಆಯೋಜನೆ ಪ್ರಸ್ತಾವನೆಗೆ ಸಂಸದ ಯದುವೀರ್ ಹೇಳಿದ್ದೇನು?

ಮೈಸೂರು: ಮೈಸೂರಿನ ನರಸಿಂಹರಾಜ (N.R.) ವಿಧಾನಸಭಾ ಕ್ಷೇತ್ರದಲ್ಲಿ ನಿಯಮಾನುಸಾರ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿಲ್ಲ. ಅಲ್ಲಿ ಕಾನೂನು ಗಾಳಿಗೆ ತೂರಿ ಅಕ್ರಮವಾಗಿ ಗುಂಪು ಗುಂಪಾಗಿ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿ ಬಿಎಲ್‌ಎಗಳಿಗೆ ಕೊಲೆ ಬೆದರಿಕೆ, ಭದ್ರತೆ ಕೊಡಿ”
ಎನ್‌.ಆರ್. ಕ್ಷೇತ್ರದ ಸದ್ಯದ ಕಾನೂನು ಸುವ್ಯವಸ್ಥೆಯ ಸ್ಥಿತಿಯನ್ನು ಎತ್ತಿ ತೋರಿಸಿದ ಯದುವೀರ್, ನರಸಿಂಹರಾಜ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರೇ ಹೆಚ್ಚಾಗಿದ್ದಾರೆ. ಅಲ್ಲಿನ ಅಧಿಕಾರಿಗಳು ಮಸೀದಿಯೊಳಗೆ ಕುಳಿತುಕೊಂಡು ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿದ್ದಾರೆ. ಬಿಜೆಪಿಯವರು ಅಥವಾ ನಮ್ಮ ಪಕ್ಷದ ಬೂತ್ ಮಟ್ಟದ ಏಜೆಂಟರು (BLA) ಆ ಭಾಗಕ್ಕೆ ಹೋಗಲು ಅಲ್ಲಿನ ಅಲ್ಪಸಂಖ್ಯಾತರು ಬಿಡುತ್ತಿಲ್ಲ. ನಮ್ಮ ಬಿಎಲ್‌ಎಗಳು ಕ್ಷೇತ್ರಕ್ಕೆ ಹೋದರೆ ಅವರಿಗೆ ನೇರವಾಗಿ ಕೊಲೆ ಬೆದರಿಕೆ ಹಾಕಲಾಗುತ್ತಿದೆ. ಬಿಜೆಪಿಯವರಿಗೆ ಬೂತ್‌ಗಳ ರಚನೆಗೂ ಅಲ್ಲಿ ಅವಕಾಶ ನೀಡುತ್ತಿಲ್ಲ. ಹೀಗಾಗಿ, ಸರ್ಕಾರ ಸೂಕ್ತ ಭದ್ರತೆಯೊಂದಿಗೆ ಪರಿಷ್ಕರಣೆ ನಡೆಸಬೇಕು. ತಕ್ಷಣವೇ ಎನ್‌.ಆರ್. ಕ್ಷೇತ್ರಕ್ಕೆ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ನಿಯೋಜಿಸಬೇಕು, ಎಂದು ಆಗ್ರಹಿಸಿದರು.

ದಿಢೀರ್ 1 ಲಕ್ಷ ಮತದಾರರ ಹೆಚ್ಚಳ
ಕ್ಷೇತ್ರದ ಮತದಾರರ ಸಂಖ್ಯೆಯಲ್ಲಾಗಿರುವ ಏರಿಕೆಯನ್ನು ಪ್ರಶ್ನಿಸಿದ ಸಂಸದರು, ಎನ್‌.ಆರ್. ಕ್ಷೇತ್ರದಲ್ಲಿ ದಿಢೀರನೇ 1 ಲಕ್ಷ ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಮತದಾರರು ಹೆಚ್ಚಾಗಲು ಕಾರಣವೇನು? ಅಲ್ಲಿ ವ್ಯಾಪಕವಾಗಿ ದಾಖಲೆಗಳ ನಕಲೀಕರಣ (ಫೋರ್ಜರಿ) ನಡೆಯುತ್ತಿದೆ. ಇಡೀ ಪರಿಷ್ಕರಣಾ ಕ್ರಮವು ಸಂಪೂರ್ಣವಾಗಿ ಕ್ರಮಬದ್ಧವಾಗಿಲ್ಲ. ಈ ರೀತಿಯ ಅಕ್ರಮಗಳಿಂದಾಗಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಕೂಡ ಇಲ್ಲಿನ ಮತದಾರರ ಪಟ್ಟಿಗೆ ಸೇರ್ಪಡೆಯಾಗುವ ಅಪಾಯ ಸೃಷ್ಟಿಯಾಗಿದೆ. ಈ ಎಲ್ಲಾ ಅಕ್ರಮಗಳ ವಿರುದ್ಧ ನಾವು ಈಗಾಗಲೇ ಮೈಸೂರು ಜಿಲ್ಲಾಧಿಕಾರಿಗಳಿಗೆ (DC) ದೂರು ನೀಡಿದ್ದೇವೆ, ಎಂದು ತಿಳಿಸಿದರು.

ಈ ಬಾರಿ ಸರಳ ದಸರಾ ಮಾಡಿ, ದಸರಾಗೆ ಕಂಬಳ ಬೇಡ”
ರಾಜ್ಯದಲ್ಲಿ ಆವರಿಸಿರುವ ಮಳೆ ಕೊರತೆ ಹಾಗೂ ಬರಗಾಲದ ಹಿನ್ನೆಲೆಯಲ್ಲಿ ದಸರಾ ಆಚರಣೆಯ ಕುರಿತು ಸರ್ಕಾರಕ್ಕೆ ಸಲಹೆ ನೀಡಿದ ಯದುವೀರ್, ರಾಜ್ಯದ ಜನತೆ ಮಳೆಯಿಲ್ಲದೆ, ಕುಡಿಯುವ ನೀರಿಲ್ಲದೆ ಸಂಕಷ್ಟದಲ್ಲಿದ್ದಾರೆ. ರೈತರು ಕಂಗಾಲಾಗಿದ್ದಾರೆ. ಇಂತಹ ಪ್ರಸ್ತುತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಬಾರಿ ಸರಳವಾಗಿ ದಸರಾ ಮಹೋತ್ಸವವನ್ನು ಆಚರಿಸಬೇಕು, ಎಂದು ಒತ್ತಾಯಿಸಿದರು.

ಮೈಸೂರು ದಸರಾದಲ್ಲಿ ಕಂಬಳ ಆಯೋಜಿಸುವ ಪ್ರಸ್ತಾಪವನ್ನು ವಿರೋಧಿಸಿದ ಸಂಸದ ಯದುವೀರ್ ಒಡೆಯರ್, ಕಂಬಳ ಕ್ರೀಡೆಗೆ ಸಮಾಜದಲ್ಲಿ ತನ್ನದೇ ಆದ ವಿಶಿಷ್ಟ ಗೌರವ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಇದೆ. ಆದರೆ, ದಸರಾ ಎಂಬುದು ಮೈಸೂರಿನ ಪರಂಪರೆಯ ಧಾರ್ಮಿಕವಾದ ಆಚರಣೆ. ಇಲ್ಲಿಗೆ ಕಂಬಳವನ್ನು ಬಲವಂತವಾಗಿ ಹೇರುವುದು ಬೇಡ. ಕರಾವಳಿಯ ಆಚರಣೆಗಳು ಆಯಾ ಭಾಗದಲ್ಲೇ ನಡೆದರೆ ಚಂದ. ನಾಳೆ ದಕ್ಷಿಣ ಕನ್ನಡದವರು ಹೋಗಿ ನಾವು ಅಲ್ಲೇ ಮೈಸೂರು ದಸರಾ ಮಾಡುತ್ತೇವೆ ಎಂದರೆ ಅದಕ್ಕೆ ಏನಾದರೂ ಅರ್ಥ ಇರುತ್ತದೆಯೇ? ಖಂಡಿತ ಇಲ್ಲ. ಹಾಗಾಗಿ, ಮೈಸೂರು ದಸರಾ ಆಚರಣೆಗೆ ಕಂಬಳದ ಯಾವುದೇ ಅವಶ್ಯಕತೆ ಇಲ್ಲ, ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಎಸ್‌ಐಆರ್ ಅಕ್ರಮ ಆರೋಪ, ಮುಖ್ಯ ಚುನಾವಣಾಧಿಕಾರಿಗೆ ಬಿಜೆಪಿ ನಿಯೋಗ ದಾಖಲೆ ಸಹಿತ ದೂರು

ಹೆಚ್ಚಿನ ಸುದ್ದಿ

Change Language »
error: Content is protected !!