ಮಸೀದಿಗಳಲ್ಲಿ ಕೂಗುವ ಆಜಾನ್ ಬಗ್ಗೆ ಮಾಜಿ ಸಚಿವ ಈಶ್ವರಪ್ಪ ನೀಡಿದ ಹೇಳಿಕೆಯನ್ನು ಖಂಡಿಸಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯೆದುರು ಪ್ರತಿಭಟನೆ ನಡೆದಿದೆ. ಈ ವೇಳೆ ಯುವಕನೊಬ್ಬ ಜಿಲ್ಲಾಧಿಕಾರಿಗಳ ಕಚೇರಿಯೆದುರೇ ಆಜಾನ್ ಕೂಗುವ ಮೂಲಕ ಸುದ್ದಿಯಾಗಿದ್ದಾನೆ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ಈ ದೃಶ್ಯ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಪ್ರತಿಭಟನೆ ನಡೆಯುತ್ತಿದ್ದ ವೇಳೆ ಪ್ರತಿಭಟನಾಕಾರರು ಹಾಗೂ ಪೋಲೀಸರ ನಡುವೆ ವಾಗ್ವಾದ ನಡೆದ ಕಾರಣ ಕೆಲಹೊತ್ತು ಬಿಗುವಿನ ಪರಿಸ್ಥಿತಿ ಉಂಟಾಗಿತ್ತು. ಈ ವೇಳೆ ಪ್ರತಿಭಟನಾಕಾರರು ನಮ್ಮ ಆಜಾನ್ ಬಗ್ಗೆ ಮಾತನಾಡಲು ಈಶ್ವರಪ್ಪ ಅವರಿಗೆ ಏನು ಹಕ್ಕಿದೆ. ಇವತ್ತು ಇಲ್ಲಿ ಮಾತ್ರ ಆಜಾನ್ ಕೂಗುತ್ತಿದ್ದೇವೆ. ನಾಳೆ ವಿಧಾನಸೌಧದಲ್ಲೂ ಸಹ ಅಜಾನ್ ಮೊಳಗಲಿದೆ ಆಗ ಏನು ಮಾಡುವಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರನ್ನು ಸಂತೈಸಿದ ಪೊಲೀಸರು ಅಲ್ಲಿಂದ ಹೊರಗೆ ಕಳುಹಿಸಿದ್ದಾರೆ.
ಮಾ. 17 ರಂದು ನಿಷೇಧಿತ ಪಿಎಫ್ಐ ಸಂಘಟನೆಯ ಸದಸ್ಯ ಎಂದು ಹೇಳಲಾದ ಮೌಸೀನ್ ಎಂಬ ಯುವಕನ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಆಜಾನ್ ಕೂಗಿದ ಆರೋಪದ ಮೇಲೆ ಸಿಆರ್ ಪಿಸಿ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.