ಕ್ಷುಲ್ಲಕ ಕಾರಣಕ್ಕೆ ಮೂವರು ಸ್ನೇಹಿತರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದಿದೆ. ಕಲಬುರಗಿ ಮೂಲದ ಮಲ್ಲಿನಾಥ್ ಬಿರಾದಾರ್ (36) ಮೃತ ದುರ್ದೈವಿ. ಕೊಲೆ ಮಾಡಿದ ಆರೋಪಿ ಚಿಕ್ಕಮಗಳೂರು ಮೂಲದ ಗಣೇಶ್ ಎಂಬಾತನಿಗೂ ಘಟನೆಯಲ್ಲಿ ಗಾಯಗಳಾಗಿದ್ದು ಸಧ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮಲ್ಲಿನಾಥ್, ಮಂಜುನಾಥ್ ಮತ್ತು ಗಣೇಶ್ ಮೂವರೂ ಸ್ನೇಹಿತರಾಗಿದ್ದು ಮೆಜೆಸ್ಟಿಕ್ ಆಸುಪಾಸಿನಲ್ಲಿ ವಾಸಮಾಡುತ್ತಿದ್ದರು. ಸಣ್ಣಪುಟ್ಟ ಕೆಲಸ ಮಾಡಿಕೊಂಡು ಬಂದ ಹಣದಲ್ಲಿ ಮದ್ಯಸೇವಿಸಿ ರಸ್ತೆಬದಿಯಲ್ಲೇ ಮಲಗುತ್ತಿದ್ದರು. ಬುಧವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಮೂವರ ನಡುವೆ ಜಗಳವಾಗಿತ್ತು. ಗುರುವಾರ ಬೆಳಗ್ಗೆ ಎಂದಿನಂತೆ ಕೆಲಸಕ್ಕೂ ಸಹ ತೆರಳಿದ್ದರು.
ಆದರೆ ಗುರುವಾರ ಸಂಜೆ ಮತ್ತೆ ಸೇರಿದಾಗ ಗಲಾಟೆ ಬಗ್ಗೆ ಗಣೇಶ್ ಮತ್ತೆ ಕೆದಕಿದ್ದಾನೆ. ಆಗ ಮೂವರ ನಡುವೆ ಮಾರಾಮಾರಿ ನಡೆದಿದೆ. ಬಳಿಕ ತನ್ನ ಬಳಿ ಇದ್ದ ಚಾಕುವಿನಿಂದ ಗಣೇಶ್ ಮಲ್ಲಿನಾಥ್ ಮತ್ತು ಮಂಜುನಾಥ್ ಗೆ ಇರಿದಿದ್ದಾನೆ. ಮಲ್ಲಿನಾಥ್ ಮೃತಪಟ್ಟರೆ, ಮಂಜುನಾಥ್ ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.