ರಾಮನಗರ: ಇದ್ರೀಷ್ ಪಾಷಾ ಸಾವು ವಿಚಾರದಲ್ಲಿ ನನ್ನ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೆ ವಿಚಾರಣೆ ಎದುರಿಸುತ್ತೇನೆ. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ ಎಂದು ಪ್ರಕರಣದ ಪ್ರಮುಖ ಆರೋಪಿ, ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಪುನೀತ್ ಕೆರೆಹಳ್ಳಿ ಹೇಳಿದ್ದಾರೆ.
ಈ ಬಗ್ಗೆ ಸೋಮವಾರ ರಾತ್ರಿ ಫೇಸ್‌ಬುಕ್‌ನಲ್ಲಿ ಲೈವ್ ಬಂದು ಮಾತನಾಡಿದ್ದಾರೆ. ಅನೇಕ ದೇವಸ್ಥಾನಗಳಿಗೆ ಭೇಟಿ ಕೊಡುತ್ತಿದ್ದು, ಈ ಸಂದರ್ಭದಲ್ಲಿ ನನ್ನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಹೀಗಾಗಿ, ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಮಾಹಿತಿ ಬಂದರೆ ನಾನೇ ಖುದ್ದು ಪೊಲೀಸರ ಮುಂದೆ ಬರುತ್ತೇನೆ. ಶುಕ್ರವಾರ ಮಧ್ಯರಾತ್ರಿ 11.59 ರಿಂದ ಘಟನೆಯನ್ನು ಫೇಸ್ ಬುಕ್ ಲೈವ್ ಮಾಡಿದ್ದೇನೆ. ಶನಿವಾರ ಬೆಳಿಗ್ಗೆ 5ಕ್ಕೆ ಮಠಕ್ಕೆ ಹಸುಗಳನ್ನು ಬಿಡುವವರೆಗೂ ನಾನು ಪೊಲೀಸರ ಜೊತೆಯಲ್ಲೇ ಇದ್ದೆ. ನಾವು ಯಾರನ್ನೂ ಹತ್ಯೆ ಮಾಡಿಲ್ಲ. ಮರಣೋತ್ತರ ಪರೀಕ್ಷೆ ವರದಿಯೇ ಇದಕ್ಕೆ ಉತ್ತರ ನೀಡಲಿದೆ ಎಂದು ಹೇಳಿದ್ದಾರೆ.
ಯಾರಿಗೂ ನಾನು ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ. ದುಡ್ಡು ಮಾಡಲು ಈ ಹೋರಾಟಕ್ಕೆ ಬಂದಿಲ್ಲ. ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಯಾರೇ ನನ್ನ ವಿರುದ್ಧ ನಿಂತರೂ ಹೋರಾಟ ಬಿಡುವುದಿಲ್ಲ. ಮಂಡ್ಯದಿಂದ ಹಲಗೂರು, ಸಾತನೂರು ಮಾರ್ಗವಾಗಿ ನಿರಂತರವಾಗಿ ಜಾನುವಾರು ಸಾಗಣೆ ಆಗುತ್ತಿದ್ದು, ಇದಕ್ಕೆ ರಾಜಕಾರಣಿಗಳ ಕೃಪಾಕಟಾಕ್ಷವೂ ಇದೆ ಎಂದೂ ದೂರಿದ್ದಾರೆ.