ಒಕ್ಕಲಿಗ ಸಮುದಾಯದಿಂದ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ʼಉರಿಗೌಡ-ನಂಜೇಗೌಡʼ ಸಿನೆಮಾ ನಿರ್ಮಾಣಕ್ಕೆ ಬ್ರೇಕ್ ಬಿದ್ದಿದೆ. ಚಿತ್ರ ನಿರ್ಮಿಸುವುದಾಗಿ ಘೋಷಿಸಿ ಟೈಟಲ್ ರಿಜಿಸ್ಟರ್ ಮಾಡಿಸಿದ್ದ ಸಚಿವ ಮುನಿರತ್ನ ಸದ್ಯ ಯೂ-ಟರ್ನ್ ಹೊಡೆದಿದ್ತೆದಾರೆ.
ಮಾದ್ಯಮಗಳೊಂದಿಗೆ ಮಾತನಾಡಿದ ಮುನಿರತ್ನ ತಾನೊಬ್ಬ ನಿರ್ಮಾಪಕ.. ನಾನು ನಿರ್ಮಾಪಕನಾಗಿ ಯೋಚನೆ ಮಾಡಿದ್ದೆ ಅಷ್ಟೆ. ಆದ್ರೆ ಈ ಸಿನಿಮಾ ಮಾಡೋದ್ರಿಂದ ಒಂದು ಸಮುದಾಯದ ಜನರ ಮನಸ್ಸಿಗೆ ನೋವಾಗುತ್ತೆ ಅನ್ನೋದಾದ್ರೆ.. ಸಿನಿಮಾ ಕೈಬಿಡ್ತೀನಿ ಎಂದಿದ್ದಾರೆ.
ಆದಿಚುಂಚನಗಿರಿ ಮಠದ ಸ್ವಾಮಿ ನಿರ್ಮಲಾನಂದನಾಥ ಶ್ರೀಗಳ ಜೊತೆ ಮಾತುಕತೆ ನಡೆಸಿದ ಬಳಿಕ ಚಿತ್ರ ನಿರ್ಮಾಣದಿಂದ ಮುನಿರತ್ನ ಹಿಂದೆ ಸರಿದಿದ್ದಾರೆ.
ನಿರ್ಮಾಲನಾಂದ ಸ್ವಾಮೀಜಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ, ಉರಿಗೌಡ- ನಂಜೇಗೌಡ ಸಿನಿಮಾ ಕೈ ಬಿಡುವಂತೆ ಸ್ವಾಮೀಜಿ ಸಲಹೆ ನೀಡಿದ್ದಾರೆ. ಎಲ್ಲವನ್ನೂ ಸತ್ಯ ಕಥೆ ಎಂದು ಚಿತ್ರ ನಿರ್ಮಿಸಲು ಸಾಧ್ಯ ಇಲ್ಲ. ಉರಿ-ನಂಜೇಗೌಡರ ಬಗ್ಗೆ ಸಂಶೋಧನೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಅದಕ್ಕೂ ಮುನ್ನ, ಉರಿಗೌಡ-ನಂಜೇಗೌಡ ಚಿತ್ರವನ್ನು ವೃಷಭಾದ್ರಿ ಪ್ರೊಡಕ್ಷನ್ ಸಂಸ್ಥೆಯಿಂದ ನಿರ್ಮಿಸುವುದಾಗಿ ಘೋಷಿಸಿದ್ದ ಮುನಿರತ್ನ, ಸಚಿವ ಅಶ್ವಥನಾರಾಯಣ ಚಿತ್ರಕಥೆ ಇರಲಿದೆ ಎಂದು ಹೇಳುವ ಪೋಸ್ಟರ್ ಅನ್ನೂ ಬಿಡುಗಡೆಗೊಳಿಸಲಾಗಿತ್ತು. ಅದಾಗ್ಯೂ, ಚಿತ್ರದಲ್ಲಿ ತನ್ನ ಯಾವುದೇ ಪಾತ್ರವಿಲ್ಲ ಎಂದು ಅಶ್ವಥ ನಾರಾಯಣ್ ಸ್ಪಷ್ಟಪಡಿಸಿದ್ದರು.
ಸಿನೆಮಾದ ಟೈಟಲ್ ರಿಜಿಸ್ಟರ್ ಆಗುತ್ತಿದ್ದಂತೆ ಹೆಚ್‌ಡಿ ಕುಮಾರಸ್ವಾಮಿ ಸೇರಿದಂತೆ ಒಕ್ಕಲಿಗ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಕೊನೆಗೂ ಒಕ್ಕಲಿಗ ಸಮಾಜದ ಪ್ರಭಾವಿ ಸ್ವಾಮಿಜಿ ನಿರ್ಮಲಾನಂದನಾಥ ಸ್ವಾಮಿ ಮೂಲಕ ವಿವಾದಕ್ಕೆ ತೆರೆ ಬಿದ್ದಿದೆ.