Thursday, March 27, 2025
Homeರಾಜಕೀಯಪರಿಶಿಷ್ಟ ಜಾತಿಯವನಾಗಿದ್ದಕ್ಕೆ ನಾನು ಟಾರ್ಗೆಟ್: ಎಂಪಿ ಕುಮಾರಸ್ವಾಮಿ ಕಣ್ಣೀರು

ಪರಿಶಿಷ್ಟ ಜಾತಿಯವನಾಗಿದ್ದಕ್ಕೆ ನಾನು ಟಾರ್ಗೆಟ್: ಎಂಪಿ ಕುಮಾರಸ್ವಾಮಿ ಕಣ್ಣೀರು

ರಾಜ್ಯದಲ್ಲಿ ಚುನಾವಣಾ ಕಾವು ಏರುತ್ತಿದ್ದಂತೆ ರಾಜಕೀಯ ಪಕ್ಷಗಳೊಳಗಿನ ಒಳಜಗಳಗಳು ಜಗಜ್ಜಾಹೀರಾಗಲು ತೊಡಗಿವೆ. ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಎಂಪಿ ಕುಮಾರಸ್ವಾಮಿಗೆ ಮುಂದಿನ ಚುನಾವಣೆಗೆ ಟಿಕೆಟ್‌ ನೀಡಬಾರದೆಂದು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದು ಮಾಜಿ ಸಿಎಂ ಬಿಎಸ್‌ವೈ ಕಾರಿಗೆ ಮುತ್ತಿಗೆ ಹಾಕಿದ ಪ್ರಸಂಗ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ.

ಗುರುವಾರ ಪಟ್ಟಣದಲ್ಲಿ ನಡೆಯಬೇಕಿದ್ದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೂ ಮುನ್ನ ಹಾಲಿ ಶಾಸಕರ ಬಗ್ಗೆ ಅಸಮಾಧಾನ ಹೊಂದಿರುವ ಕಾರ್ಯಕರ್ತರು, ಬ್ಯಾನರ್‌, ಬಂಟಿಂಗ್ಸ್‌ ಹಿಡಿದು ಶಾಸಕರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ತೀವ್ರವಾಗಿ, ಬಿಎಸ್‌ವೈ ಕಾರಿಗೆ ಮುತ್ತಿಗೆ ಹಾಕಿದ್ದರಿಂದ ಕೋಪಗೊಂಡ ಬಿಎಸ್‌ವೈ ʼವಿಜಯ ಸಂಕಲ್ಪʼ ಯಾತ್ರೆಯನ್ನು ರದ್ದುಗೊಳಿಸಿ ಹೆಲಿಕಾಪ್ಟರ್‌ ಏರಿ ಚಿಕ್ಕಮಗಳೂರಿಗೆ ತೆರಳಿದ್ದಾರೆ.

ಕ್ಷೇತ್ರದಲ್ಲಿ ಕುಮಾರಸ್ವಾಮಿಯವರು ಅಭಿವೃದ್ಧಿ ಕೆಲಸ ಮಾಡಿಲ್ಲ, ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಎಂದು ಆಕ್ರೋಶಗೊಂಡಿರುವ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಮತ್ತೊಮ್ಮೆ ಅವರಿಗೆ ಟಿಕೆಟ್‌ ನೀಡಬಾರದೆಂದು ಪಟ್ಟು ಹಿಡಿದಿದ್ದಾರೆ. ಇನ್ನು ಕ್ಷೇತ್ರದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಹಸನದ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಕುಮಾರಸ್ವಾಮಿ, ನಾನು ಪರಿಶಿಷ್ಟ ಜಾತಿಯವನು ಎಂಬ ಕಾರಣಕ್ಕೆ ನನ್ನನ್ನು ಗುರಿಯಾಗಿಸಲಾಗುತ್ತಿದೆ ಎಂದಿದ್ದಾರೆ.

ಕಣ್ಣೀರಿಡುತ್ತಿರುವ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ

“ನಾನೊಬ್ಬ ಪರಿಶಿಷ್ಟ ಜಾತಿಯವನು ಎಂಬ ಕಾರಣಕ್ಕೆ ಗುರಿಯಾಗಿಸಿಕೊಂಡಿದ್ದಾರೆ, ಕೆಲವರಲ್ಲಿ ಆ ಮನೋಭಾವ ಇದೆ” ಎಂದು ಅವರು ಕಣ್ಣೀರಿಟ್ಟಿದ್ದಾರೆ.

‘ನಾನು ಎಸ್‌ಸಿ ಎಂದು ಮೊದಲಿನಿಂದಲೂ ಒಂದು ಗುಂಪು ನನ್ನ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಅದಾಗ್ಯೂ, ಯಡಿಯೂರಪ್ಪ ಅವರು ನನ್ನನ್ನು ಕರೆದು ಮಾತನಾಡಿದ್ದು, ಅಭ್ಯರ್ಥಿ ನೀನೇ, ತಲೆಕೆಡಿಸಿಕೊಳ್ಳಬೇಡ ಎಂದು ಭರವಸೆ ನೀಡಿದ್ದಾರೆ. ಬಿಎಸ್‌ವೈ ಹೇಳಿದಂತೆ ನಡೆದುಕೊಳ್ಳುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!