ಮೈಸೂರು : ಮುಡಾ ನಿವೇಶನ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದಂತೆ ಲೋಕಾಯುಕ್ತ ಅಧಿಕಾರಿಗಳು ಕೇಳುತ್ತಿದ್ದಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಅವರು ಲೋಕಾಯುಕ್ತ ವಿರುದ್ಧ ವಾಗ್ದಾಳಿ ನಡೆಸಿದರು.
ಸಾಕ್ಷ್ಯಾಧಾರಗಳ ಕೊರತೆ ಹಾಗೂ ಪ್ರಕರಣವು ಸಿವಿಲ್ ಸ್ವರೂಪದ್ದು ತನಿಖೆ ಮಾಡುವಂತದ್ದಲ್ಲ ಎಂದು ಬಿ.ರಿಪೋರ್ಟ್ ಸಲ್ಲಿಸಲು ಮುಂದಾಗಿರುವ ಲೋಕಾಯುಕ್ತದಿಂದ ಸ್ನೇಹಮಯಿ ಕೃಷ್ಣ ಅವರಿಗೆ ನೋಟಿಸ್ ನೀಡಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಲ್ಲಾ ಸಾಕ್ಷ್ಯಾಧಾರಗಳನ್ನು ಹೆಚ್ಚಾಗಿ ಕೊಟ್ಟಿದ್ದೇನೆ. ನನಗಿರುವಷ್ಟೂ ಕಾನೂನು ಅರಿವು ಅವರಿಗೆ ಇಲ್ವಾ? ಸಿಎಂ ಸೇರಿದಂತೆ ಎಲ್ಲಾ ಆರೋಪಿಗಳ ರಕ್ಷಣೆ ಮಾಡಲು ಲೋಕಾಯುಕ್ತ ಅಧಿಕಾರಿಗಳು ಮುಂದಾಗಿ ಸುಳ್ಳು ಬಿ.ರಿಪೋರ್ಟ್ ಸಲ್ಲಿಸಲು ಸಿದ್ಧತೆ ಮಾಡಿದ್ದಾರೆ ಎಂದು ದೂರಿದರು.
ಎಲ್ಲಾ ಆರೋಪಿಗಳ ವಿರುದ್ಧದ ಆರೋಪಗಳನ್ನ ಸಾಬೀತು ಮಾಡಲು ಕಾನೂನು ಹೋರಾಟವನ್ನು ಮುಂದುವರಿಸುವೆ. ನಾನು 10ನೇ ತರಗತಿವರಗೆ ಓದಿರಬಹುದು. ಪ್ರಕರಣದಲ್ಲಿ ಸಿಎಂಗೆ ಶಿಕ್ಷ ಕೊಟ್ಟೆ ಕೊಡಿಸಲು ಕಾನೂನು ಹೋರಾಟ ಬಿಡಲ್ಲ ಎಂದು ಸ್ನೇಹಮಯಿ ಕೃಷ್ಣ ಸವಾಲ್ ಹಾಕಿದರು. ಅಲ್ಲದೇ ಪ್ರಕರಣದ ತನಿಖೆ ಸರಿಯಾಗಿ ಮಾಡದೇ ಬಿ.ರಿಪೋರ್ಟ್ ಹಾಕಲು ಮುಂದಾಗಿರುವುದು ಸರಿಯಲ್ಲ ಎಂದು ಕುಟುಕಿದರು.