ಬೆಂಗಳೂರು : ಸಿಎಂ ಮತ್ತವರ ಕುಟುಂಬಕ್ಕೆ ಕ್ಲೀನ್ ಚಿಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಆರ್ ಅಶೋಕ್ ಅವರು, ತಪ್ಪಿಲ್ಲದಿದ್ದರೆ ಸಿಎಂ ಪತ್ನಿ ಅವರು 14 ನಿವೇಶನಗಳನ್ನು ಮುಡಾಗೆ ಯಾಕೆ ವಾಪಸ್ ಕೊಟ್ಟರು. ಇದು ಕ್ಲೀನ್ ಚಿಟ್ ಕೊಡಲು ಲೋಕಾಯುಕ್ತರಿಂದ ಪೂರ್ವನಿಯೋಜಿತ ವರದಿ ಎಂದು ಅಶೋಕ್ ಆರೋಪಿಸಿದರು.
ಲೋಕಾಯುಕ್ತ ಬಿ ರಿಪೋರ್ಟ್ನಿಂದ ನೂರರಷ್ಟು ನಮಗೆ ಬೇಜಾರಾಗಿದೆ. ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದರೆ ಮಾತ್ರ ಸತ್ಯಾಸತ್ಯತೆ ಹೊರಬಲಿದೆ ಎಂದು ನಾವು ಈ ಮೊದಲಿನಿಂದಲೂ ಆಗ್ರಹಿಸುತ್ತಿದ್ದೇವೆ. ಅಧಿಕಾರಿಗಳಿಗೆ ವರ್ಗಾವಣೆ ಹಾಗೂ ಪ್ರಮೋಷನ್ ಬೇಕು. ಹೀಗಾಗಿ ಸಿಎಂ ವಿರುದ್ಧ ಈ ರೀತಿಯಾಗಿ ವರದಿ ನೀಡಿದ್ದಾರೆಂದು ಆಪಾದನೆ ಮಾಡಿದರು.
ಲೋಕಾಯುಕ್ತ ವರದಿಯು ಪೂರ್ವ ನಿಯೋಜಿತವಾಗಿದ್ದು, ಪ್ರಕರಣದಲ್ಲಿ ಎ1, ಎ2, ಎ3 ಆರೋಪಿಗಳ ತಪ್ಪಿಲ್ಲ ಎಂದು ಲೋಕಾಯುಕ್ತ ಅಧಿಕಾರಿಗಳ ನಿಲುವು. ತಪ್ಪಿಲ್ಲವಾದಲ್ಲಿ ಸೈಟ್ಗಳನ್ನು ವಾಪಸ್ ನೀಡುವ ಅಗತ್ಯವೇನಿತ್ತು? ಲೇಔಟ್ ಅಕ್ರಮ, ಅದು ಅವರಿಗೆ ಗೊತ್ತೇ ಇಲ್ಲ ಅಂತಾರೆ. 50:50 ಸೈಟ್ ಬೇಕು ಅಂದಾಗ ಮಾತ್ರ ನೋಡಿದ್ದಾರೆ. ಸಿದ್ದರಾಮಯ್ಯ ಒಂದು ಫೋನ್ ಕಾಲ್ ಕೂಡ ಮಾಡಿಲ್ಲ.
ಸಿಎಂ ಒಂದು ಪತ್ರವನ್ನು ಬರೆದಿಲ್ವಂತೆ. ಸಿದ್ದರಾಮಯ್ಯ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಳ್ಳೋಕೆ ಮೂರ್ಖರಾ? ಪ್ರಕರಣದಲ್ಲಿ ಏನು ಇಲ್ಲ ಅಂದಿದ್ದರೆ ದುಬಾರಿ ವಕೀಲರನ್ನು ತಮ್ಮ ಪರ ವಾದಿಸಲು ಯಾಕೆ ಸಿಎಂ ಅಷ್ಟೊಂದು ಖರ್ಚು ಮಾಡಿ ಕರೆ ತಂದರು? ಹಳ್ಳಿಯ ವಕೀಲರಿಂದ ಕೇಸ್ ಎದುರಿಸಬಹುದಿತ್ತಲ್ವಾ ಎಂದು ಅಶೋಕ್ ಪ್ರಶ್ನಿಸಿದರು.
ಒಂದೆಡೆ ಸಿಎಂ ಆಗಬೇಕು ಎಂಬ ಕನಸನ್ನು ಇಟ್ಟುಕೊಂಡವರಿಗೆ ನಿದ್ರೆ ಇಲ್ಲ. ಸಿಎಂ ಆಗಬೇಕು ಎಂಬುವವರ ಕನಸು ನುಚ್ಚು ನೂರಾಗಿದೆ. ನಾಳೆ ಬೆಂಗಳೂರಿನಲ್ಲಿ ನಾವು 10 ಜನ ಸಭೆ ಸೇರುತ್ತಿದ್ದೇವೆ. ಸಭೆಯಲ್ಲಿ ಮುಡಾ ಪ್ರಕರಣದ ಬಗ್ಗೆ ಚರ್ಚೆ ಮಾಡಿ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸುತ್ತೇವೆ ಎಂದು ಹೇಳಿದರು.