ನವದೆಹಲಿ: ಕ್ರಿಕೆಟ್ ಅಭಿಮಾಣಿಗಳ ಪಾಲಿಗೆ ಹಬ್ಬವಾಗಿರುವ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 16ನೆ ಆವೃತ್ತಿ ಮಾರ್ಚ್ 31ರಂದು ಆರಂಭವಾಗಲಿದ್ದು, ಈ ಬಾರಿಯ ಹಣಾಹಣಿ ಭಾರೀ ಕುತೂಹಲ ಮೂಡಿಸಿದೆ.
ಕೊರೋನಾ ಕಾರಣದಿಂದ 3 ಸೀಸನ್ ವಿದೇಶದಲ್ಲಿ ನಡೆದಿದ್ದ ಮಿಲಿಯನ್ ಡಾಲರ್ ಪಂದ್ಯಾವಳಿ, ಈ ಬಾರಿ ಸ್ವದೇಶದಲ್ಲಿ ನಡೆಯುತ್ತಿದ್ದು, ಮೊದಲ ಪಂದ್ಯದಲ್ಲೇ ಧೋನಿ ಅಭಿಮಾನಿಗಳಿಗೆ ನಿರಾಸೆಯಾಗುವ ಸುದ್ದಿಯೊಂದಿದೆ. ಧೋನಿ ಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಗುಜರಾತ್ ತಂಡ ವಿರುದ್ಧದ ಪಂದ್ಯದಲ್ಲಿ ಧೋನಿ ಭಾಗವಹಿಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ಈ ಸೀಸನ್ ನಲ್ಲಿ ಭಾರತದ ಸ್ಟಾರ್ ಪ್ಲೇಯರ್ ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯಾ ಆಟ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಸಿದ್ಧವಾಗಿದ್ದಾರೆ. ಮುಂಬೈ ತಂಡ ಬೌಲರ್ ಜಸ್ಪ್ರೀತ್ ಬುಮ್ರಾ ಸದ್ಯ ಆಟವಾಡುವ ಸಾಧ್ಯತೆ ಇಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಸಂಜೆ 6 ಗಂಟೆಯಿಂದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಳಿಕ ನಡೆಯುವ ಈ ಸೀಸನ್‌ನ ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಹಾಲಿ ಚಾಂಪಿಯನ್ ಗುಜರಾತ್ ತಂಡ ಹಾಗೂ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯ ಚೆನ್ನೈ ತಂಡ ಮುಖಾಮುಖಿಯಾಗಲಿವೆ.
ಈ ರಂಗುರಂಗಿನ ಸಮಾರಂಭದಲ್ಲಿ ಖ್ಯಾತ ಗಾಯಕ ಅರಿಜಿತ್ ಸಿಂಗ್, ನಟಿ ತಮನ್ನಾ ಭಾಟಿಯಾ, ಕನ್ನಡತಿ ರಶ್ಮಿಕಾ ಮಂದಣ್ಣ, ಬಾಲಿವುಡ್ ಸೂಪರ್ ಸ್ಟಾರ್‌ಗಳಾದ ಕತ್ರಿನಾ ಕೈಫ್, ಟೈಗರ್ ಶ್ರಾಫ್, ಮೊದಲಾದವರು ಭಾಗವಹಿಸುವ ನಿರೀಕ್ಷೆಯಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶೇಷ ಲೇಸರ್ ಶೋ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.