ಮೈಸೂರು : ನಗರದಲ್ಲಿ (Mysuru) ಸಂಚಾರ ನಿಯಂತ್ರಣಕ್ಕಾಗಿ ಅಳವಡಿಸಲಾದ ಹೊಸ ಸಿಗ್ನಲ್ (Traffic signal) ವ್ಯವಸ್ಥೆಯಲ್ಲಿ ಭಾರಿ ಗೊಂದಲ ಮತ್ತು ಹಣ ವ್ಯರ್ಥವಾಗಿರುವ ಬಗ್ಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer wadiyar) ಕಳವಳ ವ್ಯಕ್ತಪಡಿಸಿದ್ದಾರೆ. ಸುಮಾರು ಎಂಟು ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾದ ಈ ಯೋಜನೆ ತಾಂತ್ರಿಕವಾಗಿ ಮತ್ತು ವೈಜ್ಞಾನಿಕವಾಗಿ ಸಂಪೂರ್ಣ ವಿಫಲವಾಗಿದೆ ಎಂದು ಅವರು ನೇರವಾಗಿ ದೂರಿದ್ದಾರೆ.
ಯಾವುದೇ ಒಂದು ದೊಡ್ಡ ಮೂಲಸೌಕರ್ಯ ಯೋಜನೆಯನ್ನು ಜಾರಿಗೊಳಿಸುವ ಮುನ್ನ ನಡೆಸಬೇಕಾದ ವಾಹನ ಸಂಚಾರ ಗಣತಿ, ಎಂಜಿನಿಯರಿಂಗ್ ಸಮೀಕ್ಷೆ ಹಾಗೂ ನಾಗರಿಕರ ಅಭಿಪ್ರಾಯ ಸಂಗ್ರಹದಂತಹ ಪ್ರಾಥಮಿಕ ನಿಯಮಗಳನ್ನು ಇಲ್ಲಿ ಗಾಳಿಗೆ ತೂರಲಾಗಿದೆ. ಕನಿಷ್ಠ ಮಟ್ಟದ ಅಧ್ಯಯನವೂ ಇಲ್ಲದೆ ಆತುರವಾಗಿ ಈ ವ್ಯವಸ್ಥೆಯನ್ನು ರೂಪಿಸಿರುವುದರಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗಿದೆ ಎಂಬುದು ಅವರ ಪ್ರಮುಖ ಆರೋಪವಾಗಿದೆ.
ಇದನ್ನೂ ಓದಿ : ಮೈಸೂರು ದಸರಾದಲ್ಲಿ ಈ ಬಾರಿ ಕರಾವಳಿಯ ಕಂಬಳದ ವೈಭವ..
ಪ್ರಸ್ತುತ ನಗರದ ಬಹುತೇಕ ಭಾಗಗಳಲ್ಲಿ ಅಳವಡಿಸಲಾದ ಈ ಸಿಗ್ನಲ್‌ಗಳು ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿರುವುದೇ ಈ ಯೋಜನೆಯ ಕಳಪೆ ಅನುಷ್ಠಾನಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ ಈ ಕೂಡಲೇ ಸಂಬಂಧಪಟ್ಟ ನಗರಾಡಳಿತದ ಜವಾಬ್ದಾರಿಯುತ ಅಧಿಕಾರಿಗಳು ಸಾರ್ವಜನಿಕರಿಗೆ ಸೂಕ್ತ ವಿವರಣೆ ನೀಡಬೇಕು ಮತ್ತು ಈ ಲೋಪದೋಷಗಳಿಗೆ ಹೊಣೆಗಾರರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಸಂಸದರು ಆಗ್ರಹಿಸಿದ್ದಾರೆ.