Monday, August 17, 2026
Homeಟಾಪ್ ನ್ಯೂಸ್TEJASVI SURYA: 'ಕಾರು ಕೇಳಿದ್ದು ನಿಜ..' ಅಸಲಿ ಕಾರಣ ಬಿಚ್ಚಿಟ್ಟು ಡಿಕೆಶಿಗೆ‌ ಸಂಸದ ಸೂರ್ಯ ಟಾಂಗ್!

TEJASVI SURYA: ‘ಕಾರು ಕೇಳಿದ್ದು ನಿಜ..’ ಅಸಲಿ ಕಾರಣ ಬಿಚ್ಚಿಟ್ಟು ಡಿಕೆಶಿಗೆ‌ ಸಂಸದ ಸೂರ್ಯ ಟಾಂಗ್!

ಬೆಂಗಳೂರು: ಮದುವೆಗಾಗಿ (Marriage) ಅಲ್ಲ, ಕ್ಷೇತ್ರದ ಕೆಲಸಕ್ಕೆ ಓಡಾಡಲು ಕಾರು (Car) ಬೇಕು ಅಂತ ಕೇಳಿದ್ದೆ ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಸ್ಪಷ್ಟಪಡಿಸಿದ್ದಾರೆ.

ಮದುವೆ ವೇಳೆ ಕಾರಿಗಾಗಿ ಬಿಜೆಪಿ ಸಂಸದ ಪತ್ರ ಬರೆದಿದ್ದರು ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ಅಲ್ಲಗೆಳೆದ ಸೂರ್ಯ, ವರ್ಷದ ಹಿಂದೆ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದಿದ್ದೆ. ಹಿಂದೆ ನನಗೆ ಕೊಟ್ಟಿದ್ದ ಕಾರು ಒಂದು ಲಕ್ಷ ಓಡಿದೆ. ಕ್ಷೇತ್ರದ ಕೆಲಸಕ್ಕೆ ಓಡಾಡಲು ಕಾರು ಬೇಕಿದೆ ಅಂತ ಕೇಳಿದ್ದೆ. ಅದನ್ನ ಬಿಟ್ಟು ನನಗೆ ಯಾರೂ ಹೆಣ್ಣು ಕೊಡಲ್ಲ, ಕಾರು ಕೊಡಿ ಅಂತ ಕೇಳಿಲ್ಲ. ಇದು ಎಲ್ಲಾ ಸಂಸದರಿಗೂ ಕೊಡಬೇಕಿರೋ ನಿಯಮ. ಈ ಪತ್ರವನ್ನ ಬಿಡುಗಡೆ ಮಾಡುತ್ತೇನೆಂದು ಹೇಳಿದ್ದರು. ನಾನೇ ರಿಲೀಸ್ ಮಾಡುತ್ತಿದ್ದೇನೆ ಎಂದು ತೇಜಸ್ವಿ ಸೂರ್ಯ ತಿರುಗೇಟು ನೀಡಿದರು.

ಸಾಗರ್ ಖಂಡ್ರೆಯಂತಹ ಬ್ಯಾಚುಲರ್‌ಗೆ ಕೂಡ ಕಾರು ಕೊಟ್ಟಿದ್ದಾರೆ. ಕಾನೂನು ಪ್ರಕಾರ ಕೊಡಲು ಅವಕಾಶ ಇದೆ. ಟೆಕ್ನಿಕಲ್ ವಿಚಾರಗಳ ಬಗ್ಗೆ ಡಿಕೆ ಮಾತನಾಡಲ್ಲ. ವೈಯಕ್ತಿಕ ನಿಂದನೆ ಆಗುವ ಕೆಲಸ ಆಗ್ತಿದೆ. ನನ್ನ ಮೇಲೆ ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ಬೇರೆ ಯಾವ ಉತ್ತರ ಕೊಡುತ್ತಿಲ್ಲ. ಟನಲ್‌ನಲ್ಲಿ ದ್ವಿಚಕ್ರ ವಾಹನ, ಆಟೋಗಳಿಗೆ ಅವಕಾಶ ಇಲ್ಲ. ಟ್ಯಾಕ್ಸ್ ಕಟ್ಟುವವರನ್ನ ಒಳಬಿಡಲ್ಲ ಅಂದರೆ ಇದು ಆರ್ಥಿಕ ಅಸ್ಪೃಶ್ಯತೆ ಅಲ್ವಾ? ಇದು ಸರಿಯಲ್ಲ. ಟನಲ್ ರೋಡ್‌ನಲ್ಲಿ ಗಂಟೆಗೆ 1,800 ಜನ ಓಡಾಡಬಹುದು. ಆದರೆ ಮೆಟ್ರೋ ಮಾಡಿದ್ರೆ 60 ಸಾವಿರ ಜನ ಓಡಾಡಬಹುದು. ಟನಲ್‌ನಿಂದ 20 ಕಂನ್ಜೆಕ್ಷನ್ ಪಾಯಿಂಟ್ ಆಗಬಹುದು ಅಂತ ವರದಿ ಇದೆ. ಸರ್ವೆಗಳಾಗದೇ ಟೆಂಡರ್ ಕರೆದಿದ್ದೀರಾ? ನಿಮ್ಮದೇ ಡಿಪಿಆರ್‌ನಲ್ಲಿ 2031 ಕ್ಕೆ ಪೂರ್ಣಗೊಳ್ಳುತ್ತೆ ಅಂತ ಇದೆ. ಈಜೀಪುರ ಸೇತುವೆ ಗುಂಡಿಗಳನ್ನೇ ಹೇಳಿದ ಸಮಯಕ್ಕೆ ಮುಚ್ಚೋಕೆ ಆಗಿಲ್ಲ. ಡಿಪಿಆರ್ 2031ಕ್ಕೆ 12 ನಿಮಿಷ, 2041 ಕ್ಕೆ 14 ನಿಮಿಷ ಉಳಿಯಲಿದೆ ಅಂತಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಸುರಂಗ ರಸ್ತೆ ಸಮರ, ಡಿಕೆಶಿ ಮುಂದೆ 10 ಪ್ರಶ್ನೆಗಳನ್ನಿಟ್ಟ ತೇಜಸ್ವಿ ಸೂರ್ಯ!

ಬೆಂಗಳೂರು ಮೆಟ್ರೋದಲ್ಲಿ ನಿತ್ಯ 10 ಲಕ್ಷ ಜನ ಓಡಾಟ ಮಾಡುತ್ತಾರೆ. ಆದರೆ ದೇಶದಲ್ಲಿ ಹೆಚ್ಚು ದರ ಪರಿಷ್ಕರಣೆ ನಮ್ಮ ಮೆಟ್ರೋದಲ್ಲಿ ಅನ್ನೋ ಬೇಸರ ಇದೆ. ಮಧ್ಯಮ ವರ್ಗ, ದೂರ ಪ್ರಯಾಣಕ್ಕೆ ಹೋಗಲು ಸಮಸ್ಯೆ ಆಗುತ್ತಿದೆ. ಗಂಡ-ಹೆಂಡತಿ ಹೋದರೆ 220 ರೂ. ಸರಾಸರಿ ಖರ್ಚಗುತ್ತಿದೆ. ಫೇರ್ ಫಿಕ್ಸೇಶನ್ ಕಮಿಟಿ, ಬಿಎಂಆರ್‌ಸಿಎಲ್ ದರ ನಿಗದಿಯಲ್ಲಿ ಸಮಸ್ಯೆ ಇದೆ ಎಂದು ಹಲವು ತಜ್ಞರು ಹೇಳಿದ್ರು. ಅದರಂತೆ ಇಂದು ಮಾತುಕತೆ ಮಾಡಿದ್ದೇವೆ. ಕಮಿಟಿ ದರ ಪರಿಷ್ಕರಣೆ ಮುಂಚೆ ಎಲೆಕ್ಟ್ರಿಸಿಟಿ, ನಿರ್ವಹಣೆ ಎಲ್ಲಾ ಸೇರಿ ಒಂದು ಫಾರ್ಮುಲಾ ಮಾಡಿ ರೆಡಿ ಮಾಡಿದ್ದಾರೆ. 2016-17 ಬೇಸ್ ವರ್ಷವಾಗಿ ಪರಿಗಣನೆ ಮಾಡಿದ್ದಾರೆ. ಆದರೆ 2017-18 ವರ್ಷ ಬೇಸ್ ಆಗಿ ತೆಗೆದುಕೊಳ್ಳಬೇಕಿತ್ತು. ಇದರಿಂದ ಸಮಸ್ಯೆ ಆಗಿದೆ. ರಾಜ್ಯ ಸರ್ಕಾರ ಎಲ್ಲಾ ಅಂಶ ಪರಿಗಣಿಸಿ, ಬಿಎಂಆರ್‌ಸಿಎಲ್‌ಗೆ ರಿವಿಷನ್ ಮಾಡಿಸಬೇಕು ಎಂದರು.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನಿರ್ದೇಶನ ಕೊಟ್ಟರೆ ಅವಕಾಶ ಇದೆ. ಈ ಬಗ್ಗೆ ರಾಜ್ಯ ಸರ್ಕಾರ ಯೋಚನೆ ಮಾಡಬೇಕು. ಬಿಎಂಆರ್‌ಸಿಎಲ್ ನಿರ್ವಹಣೆ ಮಾಡುತ್ತಿರೋದು ರಾಜ್ಯ ಸರ್ಕಾರ. ಎಂಡಿ ನೇಮಕ, ಆಪರೇಷನ್ ಈ ಬಗ್ಗೆ ನಿರ್ವಹಣೆ ರಾಜ್ಯ ಸರ್ಕಾರ ಜವಾಬ್ದಾರಿ. ಹಾಗಾಗಿ, ಸರ್ಕಾರ ಕೂಡಲೇ ಉತ್ತರ ಕೊಡಬೇಕು. ಇತರೆ ರಾಜ್ಯಗಳಿಗೆ ಇಲ್ಲದ ದರ ಏರಿಕೆ ಕರ್ನಾಟಕಕ್ಕೆ ಏಕೆ ಎಂಬ ಪ್ರಶ್ನೆಗೆ ರಾಜ್ಯ ಸರ್ಕಾರ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ಇನ್ನು ಯೆಲ್ಲೋ ಲೈನ್‌ನಲ್ಲಿ 37% ಟ್ರಾಫಿಕ್ ಕಡಿಮೆ ಆಗಿದೆ ಅಂತ ನೀವೇ ಹೇಳುತ್ತೀರಾ. ಹೀಗಿದ್ದರೂ ಟನಲ್‌ಗೆ ಯಾಕೆ ಬೆಂಬಲ ಕೊಡುತ್ತಿದ್ದೀರಾ ಎಂದು ಪ್ರಶ್ನಿಸಿದ ಸಂಸದರು, ಡಿಪಿಆರ್ ಪ್ರಕಾರ, ಮುಂದೆ ಈಗಿನ ಖರ್ಚಿಗಿಂತ 25% ಹೆಚ್ಚಳ ಆಗಲಿದೆ. ಕೇಂದ್ರ ಸರ್ಕಾರ ಅಟಲ್ ಟನಲ್‌ಗೆ 9 ಕಿಮೀ 3200 ಕೋಟಿಯಲ್ಲಿ ಮಾಡಿದ್ದಾರೆ. ಇಲ್ಲಿ ಯಾವ ಪರ್ವತ ಇದೆ ಕಿ.ಮೀಗೆ 1050 ಕೋಟಿ ಖರ್ಚು ಮಾಡುತ್ತಿದ್ದೀರಿ. ಇಲ್ಲಿ ಯಾರ ವೈಯಕ್ತಿಕ ಟೀಕೆ ಇಲ್ಲ. ಇಲ್ಲಿ ಮದುವೆ, ಎಳಸು ಚರ್ಚೆ ಬದಲು ಈ ಪ್ರಶ್ನೆಗಳಿಗೆ ಉತ್ತರ ಕೊಡಿ. ಆದಷ್ಟು ಬೇಗ ಸಮಿತಿ ರಚನೆ ಮಾಡಲಿ ಎಂದು ತೇಜಸ್ವಿ ಸೂರ್ಯ ಹೇಳಿದರು.

ಹೆಚ್ಚಿನ ಸುದ್ದಿ

Change Language »
error: Content is protected !!